
” ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಆಗಿದ್ದು ಸರ್ಕಾರದ ಜಮೀನು ಉಳಿಸೋದಕ್ಕೆ”
ಕೋಲಾರ: ಮಾಜಿ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಕುರಿತು ಎಎಸ್‌ಎಸ್‌ಕೆ ಸಂಸ್ಥಾಪಕ ಅಧ್ಯಕ್ಷ ಸಂದೇಶ್ ಗಂಭೀರ ಆರೋಪ ಮಾಡಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಸರ್ಕಾರದ ಭೂಮಿಯನ್ನು ಉಳಿಸುವ ಹೋರಾಟದ ಹಿನ್ನೆಲೆಯಲ್ಲಿ ತಮ್ಮನ್ನು ಹತ್ಯೆ ಮಾಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಾಗೇಪಲ್ಲಿಯ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿಯಿಂದ ತಮ್ಮ ಕೊಲೆಗೆ ಷಡ್ಯಂತ್ರ ನಡೆಯುತ್ತಿದೆ ಎಂದು ಸಂದೇಶ್ ಆರೋಪಿಸಿದ್ದು, ಮುಂದಿನ ದಿನಗಳಲ್ಲಿ ಅವರ ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.
ರಾಜಕಾರಣಿಗಳು ಹಾಗೂ ಬಿಲ್ಡರ್‌ಗಳು ಜಮೀನು ಖರೀದಿಸುವಾಗ ಅದರ ಪಕ್ಕದಲ್ಲಿ ಕೆರೆ, ಗೋಮಾಳ ಅಥವಾ ಕುಂಟೆ ಜಮೀನು ಇದ್ದರೆ ಮಾತ್ರ ಖರೀದಿಸುತ್ತಾರೆ. ಬಳಿಕ ಅಂತಹ ಜಮೀನುಗಳ ಮೇಲೆ ಕಣ್ಣಿಡಲಾಗುತ್ತದೆ ಎಂದು ಅವರು ಆರೋಪಿಸಿದರು.
“ಪೊಲೀಸರು ನನ್ನ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆದರೆ ಭೂಗಳ್ಳರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ. ಹೋರಾಟ ಮಾಡಿ ಸರ್ಕಾರದ ಜಮೀನನ್ನು ಬಿಡಿಸಿಕೊಟ್ಟ ನನ್ನ ಮೇಲೆಯೇ ಕೇಸ್ ಹಾಕಲಾಗುತ್ತಿದೆ” ಎಂದು ಸಂದೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಕೆ.ಎಚ್. ಮುನಿಯಪ್ಪ ಅವರು ಹೋರಾಟಗಾರರ ಭದ್ರತೆಗಾಗಿ ಗನ್‌ಮ್ಯಾನ್ ನೀಡುವಂತೆ ಸೂಚಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲವರು ಗನ್‌ಮ್ಯಾನ್ ನೀಡಬಾರದು ಎಂದು ಹೇಳುತ್ತಿದ್ದಾರೆ ಎಂದು ಸಂದೇಶ್ ಆರೋಪಿಸಿದರು. “ನಾನು ಇರುವವರೆಗೂ ಭೂಗಳ್ಳರ ವಿರುದ್ಧ ಹೋರಾಟ ಮುಂದುವರಿಸುತ್ತೇನೆ” ಎಂದು ಸಂದೇಶ್ ಘೋಷಿಸಿದ್ದಾರೆ.
