Top Storiesರಾಜ್ಯ-Karnataka

ಮತದಾರರ ಪಟ್ಟಿಯಲ್ಲಿ ಹೆಸರಿರುವ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಗ್ಯಾರಂಟಿ ಸೌಲಭ್ಯ : ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ನಿವಾಸಿಗಳಾಗಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ದಾಖಲೆಗಳು ಮತ್ತು ಫೋಟೋಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆರಂಭಿಕ ಹಂತದಲ್ಲಿ ಕೆಲವರು ಆತುರದಲ್ಲಿ ತಪ್ಪು ಮೊಬೈಲ್ ಸಂಖ್ಯೆ ಅಥವಾ ಇತರರ ಮಾಹಿತಿಯನ್ನು ನೀಡಿರುವ ಕಾರಣ, ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದರು.

“ಹಣ ಒಬ್ಬರ ಖಾತೆಗೆ ಹೋಗಬೇಕಾದರೆ ಮತ್ತೊಬ್ಬರ ಖಾತೆಗೆ ಜಮೆಯಾಗುತ್ತಿರುವಂತಹ ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲಾಗುತ್ತಿದೆ. ಕರ್ನಾಟಕದವರಿಗೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರಿಗೆ ಮಾತ್ರ ಗ್ಯಾರಂಟಿ ಸೌಲಭ್ಯ ದೊರೆಯಲಿದೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸ್ಥಗಿತಗೊಳಿಸಲಿದೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದ ಅವರು, “ವಿರೋಧ ಪಕ್ಷದವರು ಟೀಕೆ ಮಾಡುವುದೇ ಅವರ ಕೆಲಸ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ವಿಪಕ್ಷಗಳ ಆರೋಪಗಳು ಸಂಪೂರ್ಣ ಸುಳ್ಳು” ಎಂದು ಸ್ಪಷ್ಟಪಡಿಸಿದರು.

Share with Friends
author avatar
News Desk