Latestರಾಜ್ಯ-Karnataka

ಮೊದಲಬಾರಿಗೆ ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ

ಶಬರಿಮಲೆ, ಜೂ.15: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ H. D. Kumaraswamy ಅವರು ಸೋಮವಾರ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಅವರು ಕೈಗೊಂಡಿರುವ ಮೊದಲ ಶಬರಿಮಲೆ ಯಾತ್ರೆ ಇದಾಗಿದೆ.

ಇಂದು ಬೆಳಗಿನ ಜಾವ ಕೊಚ್ಚಿನ್‌ನ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಇರುಮುಡಿ ಹೊತ್ತು ಶಬರಿಮಲೆಯತ್ತ ಪ್ರಯಾಣ ಆರಂಭಿಸಿದರು. ಮಧ್ಯಾಹ್ನದ ವೇಳೆಗೆ ಪಂಪಾ ನದಿ ತೀರ ತಲುಪಿದ ಅವರು ಹಾಗೂ ಭಕ್ತರ ತಂಡವು ಪುಣ್ಯಸ್ನಾನ ನೆರವೇರಿಸಿ ದೇವಾಲಯದತ್ತ ಪಯಣ ಬೆಳೆಸಿತು.

ಸಂಜೆ ವೇಳೆಗೆ ಅಯ್ಯಪ್ಪ ಸನ್ನಿಧಿಯಲ್ಲಿ ನಡೆಯುವ ಪಡಿ ಪೂಜೆಯಲ್ಲಿ ಭಾಗವಹಿಸಲಿರುವ ಸಚಿವರು, ಬಳಿಕ ಅಯ್ಯಪ್ಪ ಸ್ವಾಮಿಗೆ ಪುಷ್ಪಾಭಿಷೇಕ ಸೇವೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ನಂಬಿಕೆ ಮತ್ತು ಭಕ್ತಿಭಾವದಿಂದ ಅವರು ಈ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಮತ್ತು ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್ ಹಾಗೂ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ತಂಡ ಕುಮಾರಸ್ವಾಮಿ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿದೆ.

Share with Friends
author avatar
News Desk