
ಜಿಬಿಎ ಚುನಾವಣೆ – ಸುಪ್ರೀಂಕೋರ್ಟ್‌ನಲ್ಲಿ ಜು.17ರಂದು ವಿಚಾರಣೆ
ನವದೆಹಲಿ, ಜು.14 : ಬೆಂಗಳೂರಿನಲ್ಲಿ ಹೊಸದಾಗಿ ರಚಿಸಲಾದ ಐದು ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 17ರಂದು ನಡೆಸಲಿದೆ.

ಸದ್ಯ ಜಿಬಿಎ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ , ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಅರ್ಜಿ ಉಲ್ಲೇಖಿಸಿ ಜುಲೈ 17 ರಂದು ನಿಗದಿಯಾಗಿರುವ ವಿಚಾರಣೆಯನ್ನು ಪಟ್ಟಿಯಿಂದ ಕೈಬಿಡದಂತೆ ಮನವಿ ಮಾಡಿದರು.
ಇನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ.ಮೋಹನ ಅವರನ್ನೊಳಗೊಂಡ ಪೀಠ ಸಮ್ಮತಿಸಿದ್ದು, ಶುಕ್ರವಾರ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇದೇ ವೇಳೆ ಜಿಬಿಎ ಹಾಗೂ ರಾಜ್ಯ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆಡಳಿತಾತ್ಮಕ ಸವಾಲುಗಳು ಎದುರಾಗಿವೆ. ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವ ಕಾರಣ, ಅದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ಭಾರೀ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸುವುದು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಎಂದು ವಾದಿಸಿವೆ.
