LatestTop Storiesಬೆಂಗಳೂರು-Bengaluru

ಶಿವಾಜಿನಗರಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ, 10 ಮಂದಿ ಬಂಧನ

ಬೆಂಗಳೂರು,ಜು.21 : ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್ ಹಾಗೂ ಪೆಪ್ಪರ್ ಸ್ಪ್ರೇ ಬಳಸಿ ಭೀಕರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸದ್ಯ ಈ ಕೃತ್ಯದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳ ಮೇಲೆ ಭೀಕರ ಹಲ್ಲೆ

ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವುಗೊಳಿಸಲು ಹೋದ ವೇಳೆ, ಕೆಲವರು ಗುಂಪು ಸೇರಿಸಿಕೊಂಡು ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ ರಾವ್, ಸಹಾಯಕ ಅಭಿಯಂತರ ಗೌತಮ್ ಮೇಲೆ ಹೆಲ್ಮೆಟ್‌ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು.ಇಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು, ಸ್ಥಳದಲ್ಲಿದ್ದ ಮಹಿಳಾ ಇಂಜಿನಿಯರ್ ರುಚಿತಾ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿದ್ದಾರೆ.

ಅಲ್ಲದೆ ಕಾರ್ಯಾಚರಣೆಯಲ್ಲಿದ್ದ ಜೆಸಿಬಿ ಚಾಲಕನಿಗೂ ಸ್ಪ್ರೇ ಎರಚಿದ್ದರು.ಇದಲ್ಲದೆ, ಉದ್ವಿಗ್ನ ಪರಿಸ್ಥಿತಿಯುಂಟಾದ ಬಳಿಕ ಕೆಲಕಾಲ ಕಾರ್ಯಾಚರಣೆಯನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿರುವುದಾಗಿ ಕೆಲಸಕ್ಕೆ ಅಡ್ಡಿಪಡಿಸಲಾಯಿತು ಎಂದು ಆರೋಪಿಸಿ ಜಿಬಿಎ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇನ್ನು ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ 10 ಆರೋಪಿಗಳನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿರಣ್ (34), ಬಸವರಾಜ್ (28), ರಂಜಿತ್ (19), ರಂಗಸ್ವಾಮಿ (49), ಮುಜಾಹಿದಾ ಅಹಮದ್ (39) ಕೊಟ್ರೇಶ್ (26), ಪರಶುರಾಮ್ (27), ರಘು (28) ಪಾರ್ಥೀಬನ್ (23) ಹಾಗೂ ಭರತ್ (24) ಎಂಬ ಬಂಧಿತರಾಗಿದ್ದಾರೆ.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ,ನ್ಯಾಯಾಲಯದ ಆದೇಶದಂತೆ ಜಿಬಿಎ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ನಗರದಲ್ಲಿ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ಅಧಿಕಾರಿಗಳ‌ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಆರೋಪಿಗಳನ್ನ ಬಂಧಿಸಲಾಗಿದೆ. ಹಲ್ಲೆ‌ ಮಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಆರೋಪಿಗಳ ಹಿನ್ನೆಲೆಯ ಬಗ್ಗೆ ನಮ್ಮ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.

Share with Friends
author avatar
Digital Desk