
ಸಿಎಂ ಡಿ.ಕೆ. ಶಿವಕುಮಾರ್‌ಗೆ ರಾಜಕೀಯ ಕಂಟಕ ಇಲ್ಲ ; ಗುರುಕೃಪೆಯಿಂದ ಎಲ್ಲ ವಿಘ್ನಗಳು ನಿವಾರಣೆ
ತುಮಕೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಯಾವುದೇ ರೀತಿಯ ರಾಜಕೀಯ ಸಂಕಷ್ಟ ಎದುರಾಗುವುದಿಲ್ಲ ಎಂದು ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗುರುಗಳ ಸಂಪೂರ್ಣ ಆಶೀರ್ವಾದವಿದ್ದು, ಅವರ ರಾಜಕೀಯ ಪಯಣದಲ್ಲಿ ಯಾವುದೇ ದೊಡ್ಡ ಅಡೆತಡೆಗಳು ಎದುರಾಗುವುದಿಲ್ಲ ಎಂದು ಹೇಳಿದರು. ಒಂದು ವೇಳೆ ಸಣ್ಣಪುಟ್ಟ ರಾಜಕೀಯ ಕಂಟಕಗಳು ಎದುರಾದರೂ ಸಹ, ಗುರುಕೃಪೆಯಿಂದ ಅವು ಸುಲಭವಾಗಿ ನಿವಾರಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖಾತೆ ಹಂಚಿಕೆ ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಹೈಕಮಾಂಡ್ ಹಾಗೂ ದೆಹಲಿ ಮಟ್ಟದ ನಾಯಕರು ರಾಜ್ಯದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಚಿವ ಸಂಪುಟ ಪುನರ್‌ರಚನೆ ಅಥವಾ ಖಾತೆ ಬದಲಾವಣೆಯ ಕುರಿತು ಅನಗತ್ಯ ಆತಂಕ ಬೇಡ ಎಂದು ತಿಳಿಸಿದ ಶ್ರೀಗಳು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ಅವರ ಆಡಳಿತ ಯಶಸ್ವಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ರೈತರು, ಬಡವರು ಮತ್ತು ಜನಸಾಮಾನ್ಯರ ಹಿತಕ್ಕಾಗಿ ಮುಖ್ಯಮಂತ್ರಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ ಎಂದು ಆಶೀರ್ವದಿಸಿದ ಅವರು, ಜನರ ಕಲ್ಯಾಣವೇ ಆಡಳಿತದ ಪ್ರಮುಖ ಗುರಿಯಾಗಿರಬೇಕು ಎಂದರು.
ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ನಿರ್ಧಾರಗಳು ಮತ್ತು ನಾಯಕತ್ವದ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನೊಣವಿನಕೆರೆ ಶ್ರೀಗಳ ಈ ಹೇಳಿಕೆ ಡಿ.ಕೆ. ಶಿವಕುಮಾರ್ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ರಾಜಕೀಯ ವಲಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
