Crime NewsLatestಬೆಂಗಳೂರು-Bengaluruಸ್ಯಾಂಡಲ್​ವುಡ್-Sandalwood

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್. 3 ಆರೋಪಿಗಳು ಮಾಫಿ ಸಾಕ್ಷಿಗೆ ಮೊರೆ. ಆ.10ಕ್ಕೆ ನಿರ್ಣಾಯಕ ಆದೇಶ

ಬೆಂಗಳೂರು: ನಟ ದರ್ಶನ್ ಹೆಸರು ಕೇಳಿಬಂದಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ-14 ಆರೋಪಿ ಪ್ರದೋಶ್ ಸೇರಿ ಒಟ್ಟು ಮೂವರು ಆರೋಪಿಗಳು ತಮ್ಮನ್ನು ಮಾಫಿ ಸಾಕ್ಷಿ Approver ಆಗಿ ಪರಿಗಣಿಸಬೇಕು ಎಂದು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.


ಇಂದು ನಡೆದ ವಿಚಾರಣೆಯಲ್ಲಿ ಸರ್ಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಪ್ರಬಲವಾದ ವಾದ ಮಂಡಿಸಿದರು. ಇದಕ್ಕೆ ತಿರುಗೇಟಾಗಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪ್ರತಿವಾದ ಮಂಡಿಸಿದ್ದಾರೆ. ಸಿಆರ್​ಪಿಸಿ ಸೆಕ್ಷನ್ 307 ಅಡಿಯಲ್ಲಿ ಮಾಫಿ ಸಾಕ್ಷಿ ಕೋರಿ ಅರ್ಜಿ ಸಲ್ಲಿಕೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಸೆಕ್ಷನ್ ಅಡಿಯಲ್ಲಿ ಯಾವ ಸಂದರ್ಭದಲ್ಲಿ ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸಬಹುದು ಎಂಬುದನ್ನು ವಿವರಿಸಿದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್ 3 ಆರೋಪಿಗಳು ಮಾಫಿ ಸಾಕ್ಷಿಗೆ ಮೊರೆ ಆ10ಕ್ಕೆ ನಿರ್ಣಾಯಕ ಆದೇಶ

ಹಿಂದೆ ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಉದಾಹರಣೆಯಾಗಿ ನೀಡಿದರು. ವಿನಯ್​ ಕುಲಕರ್ಣಿ ಕೇಸ್ ಜೊತೆಗೆ ಯೋಗೀಶ್ ಗೌಡ ಕೊಲೆ ಪ್ರಕರಣವನ್ನೂ ಉಲ್ಲೇಖಿಸಿದರು. ಯೋಗೀಶ್ ಗೌಡ ಕೇಸ್​ನಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದರು. ಆ ಆದೇಶದ ಪ್ರತಿಯನ್ನು ಕೋರ್ಟ್ ಗೆ ಸಲ್ಲಿಸಿದ್ದೇನೆಎಂದರು.ಮೊದಲು ಮಾಫಿ ಸಾಕ್ಷಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಲಿ. ಆ ಬಳಿಕ ಅದನ್ನು ಪರಿಗಣಿಸಬೇಕಾ ಬೇಡವಾ ಎಂಬ ತೀರ್ಮಾನವನ್ನು ಕೋರ್ಟ್ ಮಾಡಬಹುದು ಎಂದು ಪ್ರಸನ್ನ ಕುಮಾರ್ ವಾದಿಸಿದರು.


SPP ಅವರ ವಾದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪ್ರಕರಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮತ್ತು ವಾದ ಮಂಡಿಸುವ ಮೂಲಭೂತ ಹಕ್ಕು ಆರೋಪಿಗೆ ಇದೆ. ಆದರೆ ಮಾಫಿ ಸಾಕ್ಷಿ ಕೋರಿದ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣವೇ ಕ್ಷಮಾದಾನ ನೀಡಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರವೇ ನಿರ್ಧಾರವಾಗಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ 59ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಅವರು ಈ ಕುರಿತ ಅಂತಿಮ ಆದೇಶವನ್ನು ಆಗಸ್ಟ್ 10ಕ್ಕೆ ಕಾಯ್ದಿರಿಸಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಶ್ ಪ್ರಮುಖ ಸಂಚುಕೋರನಲ್ಲಿ ಒಬ್ಬ ಎಂಬುದು ಪೊಲೀಸರ ಆರೋಪ ಪಟ್ಟಿಯಲ್ಲಿದೆ.

ರೇಣುಕಾಸ್ವಾಮಿ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿ ಸಾಕ್ಷ್ಯ ನಾಶ ಮಾಡಿದ ಆರೋಪ. ಸಾಕ್ಷ್ಯ ಮುಚ್ಚಿ ಹಾಕಲು ದರ್ಶನ್ ಕಡೆಯಿಂದ 30 ಲಕ್ಷ ರೂ. ಹಣ ಪಡೆದ ಆರೋಪ.ಪ್ರಕರಣದಲ್ಲಿ ಬೇರೆಯವರನ್ನು ಶರಣಾಗಿಸಲು ಸಂಚು ರೂಪಿಸಿದ್ದ ಆರೋಪ. ರೇಣುಕಾಸ್ವಾಮಿ ಸಾವಿನ ವಿಚಾರವನ್ನು ಮೊದಲು ದರ್ಶನ್‌ಗೆ ತಿಳಿಸಿದ್ದ ಆರೋಪ. ಪವಿತ್ರಾ ಗೌಡರನ್ನು ಶೆಡ್‌ಗೆ ಕರೆತಂದ ಆರೋಪವೂ ಇದೆ.

ಕಾನೂನು ತಜ್ಞರ ಪ್ರಕಾರ, ಒಂದು ವೇಳೆ ಪ್ರದೋಶ್ ನ್ಯಾಯಾಲಯದಲ್ಲಿ ನಿಜವಾದ ಸಾಕ್ಷಿ ಹೇಳಿ approver ಆದರೆ, ಈ ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಆಗಸ್ಟ್ 10 ರಂದು ನ್ಯಾಯಾಲಯದ ಆದೇಶದ ಬಳಿಕ ಪ್ರಕರಣ ಮತ್ತಷ್ಟು ಹೊಸ ತಿರುವು ಪಡೆಯಲಿದೆ.

Share with Friends
author avatar
Digital Desk