
ಸಿಎಂ ಡಿಕೆಶಿ ಭೇಟಿಯ ಬಳಿಕ ಅಸಮಾಧಾನದಿಂದ ಹೊರಬಂದ ಸಭಾಪತಿ ಹೊರಟ್ಟಿ. “ಆ.14ಕ್ಕೆ ರಾಜಿನಾಮೆ”
ಬೆಂಗಳೂರು: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಎರಡನೇ ಬಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಸಮಾಧಾನದಿಂದಲೇ ವಾಪಸ್ ಆಗಿದ್ದಾರೆ.
ಇಂದು ಬೆಳಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಹೊರಟ್ಟಿ ಅವರು ಸುಮಾರು 10 ನಿಮಿಷಗಳ ಕಾಲ ಸಿಎಂ ಜೊತೆ ಖಾಸಗಿ ಮಾತುಕತೆ ನಡೆಸಿದರು.
ಮಾತುಕತೆ ಬಳಿಕ ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು. ಸಭಾಪತಿ ಅವರನ್ನು ಬೀಳ್ಕೊಡಲು ಗೇಟ್ ವರೆಗೂ ಮುಖ್ಯಮಂತ್ರಿಗಳು ಹೊರಬಂದಿದ್ದರು. ಆದರೆ ಈ ವೇಳೆ ಸಿಟ್ಟಿನಲ್ಲಿದ್ದ ಹೊರಟ್ಟಿ ತಮ್ಮ ಸಿಬ್ಬಂದಿಯತ್ತ ತಿರುಗಿ, ಏ.. ಕಾರು ಎಲ್ಲಿದೆ ಎಂದು ಗಟ್ಟಿಯಾಗಿ ಕೇಳಿದರು.

ಸಿಎಂ ಶಿವಕುಮಾರ್ ಅವರನ್ನು ಹಿಂದೆ ತಿರುಗಿಯೂ ನೋಡದೆ ನೇರವಾಗಿ ಕಾರಿನಲ್ಲಿ ತೆರಳಿದರು. ಇದರಿಂದ ಇಬ್ಬರ ನಡುವೆ ಚರ್ಚೆ ಫಲಪ್ರದವಾಗಿಲ್ಲ ಎಂಬ ಸ್ಪಷ್ಟ ಸೂಚನೆ ಸಿಕ್ಕಂತಾಗಿದೆ.ನಂತರ ಖಾಸಗಿ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಹೊರಟ್ಟಿ ಅವರು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಮೇಯವೇ ಬರುವುದಿಲ್ಲ. ನಾನು ಆಗಸ್ಟ್ 14 ರಂದು ರಾಜಿನಾಮೆ ನೀಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊರಟ್ಟಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ ಭಿನ್ನಾಭಿಪ್ರಾಯ ಇರುವ ಬಗ್ಗೆ ಕಳೆದ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಡಿಸಿಎಂ ಡಿಕೆಶಿ ಅವರನ್ನು ಎರಡು ಬಾರಿ ಭೇಟಿಯಾಗಿದ್ದರೂ ಯಾವುದೇ ರಾಜಿ ಸೂತ್ರ ಕೈಗೂಡದಿರುವುದು ಸ್ಪಷ್ಟವಾಗಿದೆ.ಹೊರಟ್ಟಿ ಅವರ ರಾಜಿನಾಮೆಯಿಂದ ವಿಧಾನ ಪರಿಷತ್‌ನಲ್ಲಿ ಹೊಸ ಸಭಾಪತಿ ಆಯ್ಕೆಯ ಪ್ರಕ್ರಿಯೆ ಚುರುಕಾಗುವ ಸಾಧ್ಯತೆ ಇದೆ.
