
ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು. ಗುಜರಾತ್ ಮೂಲದ 3 ಆರೋಪಿಗಳ ಬಂಧನ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಾಲಯದಲ್ಲಿ ಜುಲೈ 5 ರಂದು ನಡೆದಿದ್ದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ವಿಜಯಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುರೇಶ್ ಕುಮಾರ್ ಶಾಂತಿಲಾಲ್ ಸೋನಿ (51), ಬ್ರಹ್ಮಾರ ಟೋಪಿಯಾ ನೇಟ್ (35) ಮತ್ತು ಇಂದ್ರಜಿತ್ ನೇಟ್ (33) ಎಂದು ಗುರುತಿಸಲಾಗಿದೆ. ಮೂವರು ಗುಜರಾತ್ ಮೂಲದವರು.ಬಂಧಿತರಿಂದ ಪೊಲೀಸರು ಒಟ್ಟು 52,70,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಜಪ್ತಿಯಾದ ವಸ್ತುಗಳಲ್ಲಿ 67,000 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಕಾರು ಕೂಡ ಸೇರಿದೆ.

ದೇವಾಲಯದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಲು ವಿಜಯಪುರ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ತಂಡಗಳು ಸತತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.ಪ್ರಕರಣದ ಕುರಿತು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ಸಂದೀಪ್ ಪಾಟೀಲ್ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಜಯಪುರ ಜಿಲ್ಲಾ ಎಸ್ಪಿ, ಬಸವನ ಬಾಗೇವಾಡಿ ಡಿವೈಎಸ್ಪಿ, ಮುದ್ದೇಬಿಹಾಳ ಸಿಪಿಐ ಮತ್ತು ಪಿಎಸ್ಐ ಹಾಗೂ ಇತರೆ ಸಿಬ್ಬಂದಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಅವರ ಕಾರ್ಯವನ್ನು ಶ್ಲಾಘಿಸಿದರು.ದೇವಾಲಯದ ಆಸ್ತಿ ವಾಪಸ್ ಸಿಕ್ಕಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
