
ಟ್ರಾಫಿಕ್ಗೆ ಬ್ರೇಕ್ ಹಾಕಲು “ಪಂಚಸೂತ್ರ” ರೆಡಿ. ಹೈದರಾಬಾದ್ ಮಾದರಿಯಲ್ಲಿ ಹೊಸ ನಿಯಮಗಳು
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಯನ್ನು ಕಾಡುತ್ತಿರುವ ಭೀಕರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಗರ ಸಂಚಾರ ಪೊಲೀಸ್ ವಿಭಾಗವು ಹೈದರಾಬಾದ್ ಮಾದರಿಯಲ್ಲಿ “ಪಂಚಸೂತ್ರ”ಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರ ನೇತೃತ್ವದಲ್ಲಿ ಈ ಹೊಸ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದೆ.ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಇರಲಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ನಗರಕ್ಕೆ ಅತಿಹೆಚ್ಚು ವಾಹನಗಳು ಆಗಮಿಸುತ್ತಿವೆ. ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿಯೂ ಈ ಬಸ್ಗಳು ಹಾದು ಹೋಗುವುದರಿಂದ ಹೆಚ್ಚು ದಟ್ಟಣೆ ಉಂಟಾಗುತ್ತಿದೆ. ಹಗಲಿನಲ್ಲಿ ಖಾಸಗಿ ಬಸ್ಗಳ ಸಂಚಾರ ಕಡಿಮೆಯಾದರೆ ಇತರ ವಾಹನಗಳ ಸಂಚಾರವೂ ಸುಗಮವಾಗಲಿದೆ ಎಂಬುದು ಪೊಲೀಸರ ಲೆಕ್ಕಾಚಾರ.

ಅತೀ ಉದ್ದದ ಟ್ರಕ್, ಸರಕು ಸಾಗಾಣಿಕೆಯ ಭಾರೀ ವಾಹನಗಳಿಗೆ ಹಗಲಿನ ವೇಳೆ ನಗರದಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ. ಈ ವಾಹನಗಳಿಗೆ ರಾತ್ರಿ ನಿಗದಿತ ಸಮಯದಲ್ಲಿ ಮಾತ್ರ ನಗರದೊಳಗೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.ನಗರದ ಮೇಲ್ಸೇತುವೆಗಳಲ್ಲಿ ಅತಿಹೆಚ್ಚಿನ ಅಪಘಾತ ಹಾಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ, ಬೆಳಗ್ಗೆ ಮತ್ತು ಸಾಯಂಕಾಲ ಪೀಕ್ ಅವರ್ಗಳಲ್ಲಿ ಬೈಕ್ಗಳ ಸಂಚಾರಕ್ಕೆ ನಿಷೇಧ ವಿಧಿಸಲು ತೀರ್ಮಾನಿಸಲಾಗಿದೆ.ಪ್ರಾಯೋಗಿಕವಾಗಿ ಜಾರಿಯಾಗುವ ಸ್ಥಳಗಳು:ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್, ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ, ರಾಗಿಗುಡ್ಡ ಡಬಲ್ ಡೆಕ್ಕರ್ ಹಾಗೂ ಜಕ್ಕೂರು ಮೇಲ್ಸೇತುವೆ.
ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಕಂಪನಿಗಳು ಮತ್ತು ಐಟಿ ಉದ್ಯಾನವನಗಳೊಂದಿಗೆ ಮಾತುಕತೆ ನಡೆಸಿ ಒಂದೇ ಕಚೇರಿಗೆ ಹೋಗುವ ನೌಕರರು ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸುವಂತೆ ಪ್ರೋತ್ಸಾಹ ನೀಡುವ ಯೋಜನೆ ಇದೆ.ನಿಧಾನಗತಿಯಲ್ಲಿ ಚಲಿಸುವ ಆಟೋ, ಟ್ರ್ಯಾಕ್ಟರ್, ಲೋಡಿಂಗ್ ವಾಹನ, ಸಿಟಿ ಬಸ್ ಮತ್ತು ಇತರೆ 5 ಮಾದರಿಯ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಸಮಯ ನಿಗದಿಪಡಿಸಲು ನಿರ್ಧರಿಸಲಾಗಿದೆ. ಇದರಿಂದ ಫಾಸ್ಟ್ ಮೂವಿಂಗ್ ಟ್ರಾಫಿಕ್ಗೆ ಅಡ್ಡಿ ಆಗುವುದಿಲ್ಲ.
ನೆರೆಯ ತೆಲಂಗಾಣದ ಹೈದರಾಬಾದ್ನಲ್ಲಿ ಈ 5 ಸೂತ್ರಗಳು ಯಶಸ್ವಿಯಾಗಿವೆ. ಅಲ್ಲಿನ ಸುಗಮ ಸಂಚಾರ ವ್ಯವಸ್ಥೆಯ ಮಾದರಿಯನ್ನು ಅಧ್ಯಯನ ಮಾಡಿ ಬೆಂಗಳೂರಿನಲ್ಲಿಯೂ ಅದೇ ರೀತಿ ಅನುಷ್ಠಾನಕ್ಕೆ ತರಲು ಇಲಾಖೆ ಚಿಂತನೆ ನಡೆಸಿದೆ.ಸಾರ್ವಜನಿಕರ ಅನುಕೂಲಕ್ಕಾಗಿ ಈ ನಿಯಮಗಳನ್ನು ಹಂತಹಂತವಾಗಿ ಜಾರಿಗೆ ತರುವ ಬಗ್ಗೆ ಹಿರಿಯ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
