
ಹೊರ್ಮುಜ್ನಲ್ಲಿ ದಾಳಿ ನಿಲ್ಲಿಸಿ,ಇರಾನ್ಗೆ ಅಮೆರಿಕ ಖಡಕ್ ಎಚ್ಚರಿಕೆ
ವಾಷಿಂಗ್ಟನ್ / ಟೆಹ್ರಾನ್.ಜು೧೧: ಪರ್ಷಿಯನ್ ಗಲ್ಫ್ ವಲಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್ಗೆ ಅಮೆರಿಕ ತೀವ್ರ ಸ್ವರೂಪದ ಅಂತಿಮ ಎಚ್ಚರಿಕೆ (ಅಲ್ಟಿಮೇಟಮ್) ನೀಡಿದೆ. “ಹೊರ್ಮುಜ್ ಜಲಸಂಧಿಯು ಜಾಗತಿಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಇರಾನ್ ಬಹಿರಂಗವಾಗಿ ಘೋಷಿಸಬೇಕು ಮತ್ತು ಸರಕು ಸಾಗಣೆ ನೌಕೆಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ವಾಷಿಂಗ್ಟನ್ ಆಗ್ರಹಿಸಿದೆ. ಅಮೆರಿಕದ ಬೇಡಿಕೆಗಳಿಗೆ ಇರಾನ್ ಒಪ್ಪದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು “ಅಂತ್ಯಗೊಂಡಿದೆ” ಎಂದು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ತಮ್ಮ ’ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಟ್ರಂಪ್, “ನಮ್ಮ ನಡುವೆ ಸಂಘರ್ಷ ಮುಂದುವರಿದಿದ್ದರೂ, ಮಾತುಕತೆ ನಡೆಸಲು ಇರಾನ್ ಕೋರಿದೆ. ಇದಕ್ಕೆ ನಾವು ಸಮ್ಮತಿಸಿದ್ದೇವೆ. ಆದರೆ, ಕದನ ವಿರಾಮ ಒಪ್ಪಂದ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿದೆ,” ಎಂದು ಬರೆದುಕೊಂಡಿದ್ದಾರೆ. ಮಾತುಕತೆಗೆ ಸೀಮಿತ ಸಮಯಾವಕಾಶ ನೀಡಲಾಗಿದ್ದು, ವಿಫಲವಾದರೆ ಮಿಲಿಟರಿ ದಾಳಿ ಮತ್ತು ಕಠಿಣ ಆರ್ಥಿಕ ನಿರ್ಬಂಧಗಳ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಭಾಗವಾಗಿಯೇ ಇರಾನ್ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಆಸ್ತಿ ನಿರ್ವಹಣೆ ಮಾಡುತ್ತಿದ್ದ ಹಣಕಾಸು ಹೂಡಿಕೆದಾರ ಅಲಿ ಅನ್ಸಾರಿ ಮೇಲೆಯೂ ಹೊಸ ನಿರ್ಬಂಧ ಹೇರಲಾಗಿದೆ.

ಮತ್ತೊಂದೆಡೆ, ಅಮೆರಿಕದ ಹೇಳಿಕೆಯನ್ನು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೇಯ್ ತಳ್ಳಿಹಾಕಿದ್ದಾರೆ. ನಾವು ಅಮೆರಿಕದೊಂದಿಗೆ ಮಾತುಕತೆ ಕೋರಿಲ್ಲ, ಬದಲಿಗೆ ಕತಾರ್ನ ಸಂಧಾನಕಾರರನ್ನು ಭೇಟಿಯಾಗಲು ಒಪ್ಪಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಹೊರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ದೇಶಕ್ಕೆ ಸೇರಿದ್ದಾಗಿದ್ದು, ಹೊರಗಿನ ಶಕ್ತಿಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವಿಶ್ವದ ಒಟ್ಟು ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸರಬರಾಜಿನ ಸುಮಾರು ಐದನೇ ಒಂದು ಭಾಗ (೨೦%) ಇದೇ ಕಿರಿದಾದ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಪ್ರಸ್ತುತ ದಾಳಿಗಳ ಭೀತಿಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು, ಹಡಗುಗಳ ಸಂಚಾರ ತೀವ್ರವಾಗಿ ಕುಸಿದಿದೆ. ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳಿಸಲು ಕತಾರ್ ಮತ್ತು ಒಮಾನ್ ದೇಶಗಳು ರಾಜತಾಂತ್ರಿಕ ಸಂಧಾನ ಪ್ರಯತ್ನಗಳನ್ನು ತೀವ್ರಗೊಳಿಸಿವೆ.
