
ಶಾಂತಿ ಸಾಗರ್ ಹೋಟೆಲ್‌ನಲ್ಲಿ ಇಡ್ಲಿಯಲ್ಲಿ ಹುಳು ಪತ್ತೆ..!
ದೇವನಹಳ್ಳಿ: ಇಲ್ಲಿನ ಗಣೇಶ್ ಸರ್ಕಲ್‌ನಲ್ಲಿರುವ ಪ್ರಸಿದ್ಧ ಶಾಂತಿ ಸಾಗರ್ ಹೋಟೆಲ್‌ನಲ್ಲಿ ಕಳಪೆ ಮಟ್ಟದ ಹಾಗೂ ಅಸ್ವಾಸ್ಥ್ಯಕರ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಿನ್ನೆ ರಾತ್ರಿ ಹೋಟೆಲ್‌ಗೆ ತೆರಳಿದ್ದ ಗ್ರಾಹಕರೊಬ್ಬರು ಇಡ್ಲಿ ಆರ್ಡರ್ ಮಾಡಿದ್ದು, ಅವರಿಗೆ ನೀಡಿದ ಇಡ್ಲಿಯಲ್ಲಿ ಹುಳು ಪತ್ತೆಯಾಗಿದೆ. ಇದನ್ನು ಕಂಡು ದಿಗ್ಭ್ರಮೆಗೊಂಡ ಗ್ರಾಹಕ ಸ್ಥಳದಲ್ಲೇ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಆದರೆ, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವ ಬದಲು ಹೋಟೆಲ್ ಸಿಬ್ಬಂದಿ ಗ್ರಾಹಕನಿಗೆ ಅತ್ಯಂತ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.
ಸಿಬ್ಬಂದಿಯ ಈ ವರ್ತನೆಯಿಂದ ತೀವ್ರ ಆಕ್ರೋಶಗೊಂಡಿರುವ ಗ್ರಾಹಕರು ಮತ್ತು ಸಾರ್ವಜನಿಕರು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಹೋಟೆಲ್ ವಿರುದ್ಧ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
