Health | ಆರೋಗ್ಯLatestTop Storiesರಾಜ್ಯ-Karnataka

ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಡೆದು ಬಂದ ಹಾದಿ..!

ಹಾಸನ: 1937ರಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮ, ಆ ಕಾಲದ ಶ್ರೀಮಂತ ಹಾಗೂ ದಾನಶೀಲ ಕುಟುಂಬದ ಪುತ್ರಿಯಾಗಿದ್ದರು. ಅವರ ತಂದೆ ಪಟೇಲ್ ದೇವೇಗೌಡ, ತಾಯಿ ಕಾಲಮ್ಮ. ತಾತ ಪಟೇಲ್ ಸುಬ್ಬೇಗೌಡ ಹರದನಹಳ್ಳಿಯ ಹೆಸರಾಂತ ಭೂಮಾಲೀಕರಾಗಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದ ಸಮಾಜಸೇವಕರಾಗಿದ್ದರು.

ಚೆನ್ನಮ್ಮ ಮುತ್ತಿಗೆಹಿರೇಹಳ್ಳಿಯಲ್ಲಿ ನಾಲ್ಕನೇ ತರಗತಿವರೆಗೆ ಹಾಗೂ ಹೊಳೆನರಸೀಪುರದ ಹಳೆಕೋಟೆಯಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಬಳಿಕ ಶಿಕ್ಷಣವನ್ನು ಮುಂದುವರಿಸಲಿಲ್ಲ. ಶಾಲಾ ರಜೆಯಲ್ಲಿ ಆಗಾಗ ಹರದನಹಳ್ಳಿಯ ತಾತನ ಮನೆಗೆ ಹೋಗುತ್ತಿದ್ದ ಚೆನ್ನಮ್ಮ, ಅವರ ಸರಳ ಸ್ವಭಾವ, ಹಿರಿಯರ ಮೇಲಿದ್ದ ಗೌರವ ಮತ್ತು ವಿನಯ ದೇವೇಗೌಡ ಅವರ ತಾಯಿ ಲಕ್ಷ್ಮಮ್ಮ ಅವರ ಗಮನ ಸೆಳೆದಿತ್ತು.

ಚೆನ್ನಮ್ಮ ಅವರ ನೆಡದುಬಂದ ಹಾದಿ

ಚೆನ್ನಮ್ಮ ಅವರು ವಿವಾಹವಾದಾಗ ಎಚ್.ಡಿ. ದೇವೇಗೌಡರು ಕೇವಲ ಒಬ್ಬ ಸಾಮಾನ್ಯ ರೈತ ಹಾಗೂ ಸಣ್ಣ ಗುತ್ತಿಗೆದಾರರಾಗಿದ್ದರು. ಅಲ್ಲಿಂದ ಶುರುವಾದ ಅವರ ಪಯಣ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯವರೆಗೂ ತಲುಪಿತು.

ಕುಟುಂಬದ ಸದಸ್ಯರ ಪ್ರಕಾರ, ಚೆನ್ನಮ್ಮ ಅವರು ಅತ್ಯಂತ ಧಾರ್ಮಿಕ ಸ್ವಭಾವದವರಾಗಿದ್ದರು. ಪೂಜೆ, ವ್ರತ, ದೇವರ ಆರಾಧನೆ ಅವರ ದಿನಚರಿಯ ಭಾಗವಾಗಿತ್ತು. ಮನೆಗೆ ಬರುವ ಬಂಧು-ಬಳಗ, ಗ್ರಾಮಸ್ಥರು ಹಾಗೂ ನೆರವು ಕೇಳಿ ಬರುವ ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು ಅವರ ಜೀವನಶೈಲಿಯಾಗಿತ್ತು. ರಾಜಕೀಯದಿಂದ ದೂರವೇ ಇದ್ದರೂ, ಜನರೊಂದಿಗೆ ಬೆರೆತು ಬದುಕುವ ಗುಣ ಅವರಲ್ಲಿತ್ತು.

72 ವರ್ಷಗಳ ದಾಂಪತ್ಯ ಜೀವನ

ಅವರ ಬದುಕಿನಲ್ಲಿ ಒಂದು ಕರಾಳ ಘಟನೆಯೂ ನಡೆದಿದೆ. 2001ರ ಫೆಬ್ರವರಿ 21ರಂದು ಶಿವರಾತ್ರಿಯ ದಿನ ಕುಟುಂಬದ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಕುಟುಂಬದ ಆಸ್ತಿ ವಿವಾದದ ಹಿನ್ನೆಲೆ ದೇವೇಗೌಡ ಅವರ ಸಹೋದರ ಎಚ್‌.ಡಿ. ಬಸವೇಗೌಡ ಹಾಗೂ ಅವರ ಪುತ್ರರು ಲೋಕೇಶ್ ಮತ್ತು ಜ್ಞಾನೇಶ್ ನಡೆಸಿದ ಆ್ಯಸಿಡ್ ದಾಳಿಯಲ್ಲಿ ಚೆನ್ನಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಆ ದಾಳಿಯಲ್ಲಿ ಸೊಸೆ ಭವಾನಿ ರೇವಣ್ಣ ಕೂಡ ಗಾಯಗೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ (85) ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಜುಲೈ 15ರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 18) ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ.ಸತ್ಯನಾರಾಯಣ ಅವರು ಚನ್ನಮ್ಮನವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.

Share with Friends
author avatar
Digital Desk