
ಆಸ್ಪತ್ರೆಯಲ್ಲಿ 4 ಗಂಟೆಗಳ ಕಾಲ ಪತ್ನಿಯ ಪಕ್ಕದಲ್ಲೇ ಕುಳಿತಿದ್ದ ದೇವೇಗೌಡರು
ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ತಮ್ಮ ಧರ್ಮಪತ್ನಿ ಶ್ರೀಮತಿ ಚನ್ನಮ್ಮ ಅವರ ಅಂತಿಮ ಕ್ಷಣಗಳಲ್ಲಿ ಆಸ್ಪತ್ರೆಯಲ್ಲೇ ನಾಲ್ಕು ಗಂಟೆಗಳ ಕಾಲ ಅವರ ಪಕ್ಕದಲ್ಲೇ ಕುಳಿತು ಭಾವನಾತ್ಮಕವಾಗಿ ಸಮಯ ಕಳೆದರು.
ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿದ ದೇವೇಗೌಡರು, ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಾ ಭಾವುಕರಾದರು. ಹಲವು ದಶಕಗಳ ದಾಂಪತ್ಯ ಜೀವನದ ನೆನಪುಗಳ ನಡುವೆ ದೇವೇಗೌಡರು ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಮನಕಲಕುವಂತಿತ್ತು.
ಭಾವನಾತ್ಮಕ ಕ್ಷಣಗಳ ನಡುವೆಯೇ ಕೆಲವೇ ಕ್ಷಣಗಳಲ್ಲಿ ಶ್ರೀಮತಿ ಚನ್ನಮ್ಮ ಅವರು ಕೊನೆಯುಸಿರೆಳೆದರು. ದೇವೇಗೌಡರ ಜೀವನ ಸಂಗಾತಿಯ ಅಗಲಿಕೆ ಕುಟುಂಬಸ್ಥರು, ಆಪ್ತರು ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ಶ್ರೀಮತಿ ಚನ್ನಮ್ಮ ಅವರ ನಿಧನಕ್ಕೆ ವಿವಿಧ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.
7.30ಕ್ಕೆ ಆಸ್ಪತ್ರೆಯಿಂದ ಹೊರಡಲಿರುವ ಚನ್ನಮ್ಮನವರ ಪಾರ್ಥಿವ ಶರೀರ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರ ಪಾರ್ಥಿವ ಶರೀರವನ್ನು ಇಂದು ಸಂಜೆ ಸುಮಾರು 7.30 ಗಂಟೆಗೆ ಆಸ್ಪತ್ರೆಯಿಂದ ಪದ್ಮನಾಭನಗರದ ನಿವಾಸಕ್ಕೆ ಕೊಂಡೊಯ್ಯಲು ಸಿದ್ಧತೆಗಳು ಪೂರ್ಣಗೊಂಡಿವೆ.
ಪಾರ್ಥಿವ ಶರೀರ ಸಾಗಿಸಲು ಈಗಾಗಲೇ ಆಂಬುಲೆನ್ಸ್ ಸಜ್ಜುಗೊಂಡಿದ್ದು, ಕುಟುಂಬ ಸದಸ್ಯರು ಹಾಗೂ ಪೊಲೀಸ್ ಭದ್ರತೆಯಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಪದ್ಮನಾಭನಗರಕ್ಕೆ ಕರೆದೊಯ್ಯಲಾಗುತ್ತದೆ. ಮಾರ್ಗದುದ್ದಕ್ಕೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ಪೊಲೀಸರು ವಿಶೇಷ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು, ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಪದ್ಮನಾಭನಗರ ನಿವಾಸದಲ್ಲಿ ಸಾರ್ವಜನಿಕರು, ರಾಜಕೀಯ ನಾಯಕರು, ಗಣ್ಯರು ಹಾಗೂ ಹಿತೈಷಿಗಳು ಅಂತಿಮ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚನ್ನಮ್ಮನವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಚನ್ನಮ್ಮನವರು ಅಪಾರ ದೈವಭಕ್ತೆಯಾಗಿದ್ದು, ತುಂಬು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿ ಎಂದು ಸಿಎಂ ಬಣ್ಣಿಸಿದ್ದಾರೆ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಇಡೀ ಕುಟುಂಬದ ರಾಜಕೀಯ ಹಾಗೂ ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮನವರ ಪರಿಶ್ರಮ ಅಡಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಿಂದ ಅವರು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇತ್ತು. ಆದರೆ ಆ ನಂಬಿಕೆ ಹುಸಿಯಾಗಿರುವುದು ತೀವ್ರ ಬೇಸರ ತಂದಿದೆ ಎಂದು ಸಿಎಂ ತಿಳಿಸಿದ್ದಾರೆ.
“ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುವ ಮಾತಿನಂತೆ, ದೇವೇಗೌಡರ ಪ್ರತಿಯೊಂದು ಯಶಸ್ಸಿನ ಹಿಂದೆ ಚನ್ನಮ್ಮನವರ ತ್ಯಾಗ, ಸಹಕಾರ ಮತ್ತು ಧೈರ್ಯ ಇತ್ತು. ಕುಟುಂಬ ಸದಸ್ಯರು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ರಾಜಕೀಯದ ಏಳು-ಬೀಳುಗಳಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತವರು ಚನ್ನಮ್ಮನವರು” ಎಂದು ಸಿಎಂ ಶಿವಕುಮಾರ್ ಹೇಳಿದ್ದಾರೆ.
ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ದೇವೇಗೌಡರ ಬದುಕಿನ ನಿಜವಾದ ಶಕ್ತಿಯಾಗಿ ಅವರು ಕಾರ್ಯನಿರ್ವಹಿಸಿದರು. ಯಾವುದೇ ಪ್ರಚಾರ ಬಯಸದೆ, ಮೌನದಿಂದಲೇ ಇಡೀ ಕುಟುಂಬವನ್ನು ಮುನ್ನಡೆಸಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸಿಎಂ ಸ್ಮರಿಸಿದ್ದಾರೆ.
ಇಳಿವಯಸ್ಸಿನಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡಿರುವ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಚನ್ನಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಬಂಧು-ಬಳಗ ಮತ್ತು ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಾರ್ಥಿಸಿದ್ದಾರೆ.
