ಬೆಂಗಳೂರು-Bengaluru

ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಗುಂಡಿನ ಸದ್ದು : ರೌಡಿಶೀಟರ್ ಕಾಲಿಗೆ ಪೊಲೀಸ್ ಫೈರಿಂಗ್

ಬೆಂಗಳೂರು, ಜೂನ್ 11: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ರೌಡಿಶೀಟರ್‌ನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡೇಟಿಗೆ ಒಳಗಾದ ಆರೋಪಿಯನ್ನು ಜೀವ (19) ಎಂದು ಗುರುತಿಸಲಾಗಿದೆ.

ಸಿಂಗೇನಾ ಅಗ್ರಹಾರದ ತೋಪಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ಬಗೋಡಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ಮಾಹಿತಿ ಪ್ರಕಾರ, ತಿರುಪಾಳ್ಯ ನಿವಾಸಿಯಾಗಿರುವ ಜೀವ ಕೊಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಆತನ ಪಾತ್ರವಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸರು ಆತನಿಗಾಗಿ ವ್ಯಾಪಕ ಹುಡುಕಾಟ ನಡೆಸುತ್ತಿದ್ದರು.

ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ವೇಳೆ, ಆರೋಪಿಯು ಪೊಲೀಸ್ ಸಿಬ್ಬಂದಿ ನಾಗೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಎಚ್ಚರಿಕೆ ಗುಂಡು ಹಾರಿಸಿದ್ದು, ಬಳಿಕ ಆರೋಪಿಯ ಕಾಲಿಗೆ ಗುಂಡು ತಗುಲಿದೆ.

ಘಟನೆಯ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Share with Friends
author avatar
News Desk