Latestಯಾದಗಿರಿ

ಕೆಂಭಾವಿಯ ಖಾಸಗಿ ಶಾಲೆಗಳಲ್ಲಿ ಅನಧಿಕೃತ ಹಾಸ್ಟೇಲ್ ಆಟ — ಅಧಿಕಾರಿಗಳ ಮೌನಕ್ಕೆ ಆಕ್ರೋಶ!

ಯಾದಗಿರಿ: ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಹಲವು ಖಾಸಗಿ ಶಾಲೆಗಳು ಅನಧಿಕೃತವಾಗಿ ಹಾಸ್ಟೇಲ್‌ಗಳನ್ನು ನಡೆಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಮಾದಿಗ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥ ಶಾಲೆಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ನಿಯಮಗಳ ಸಂಪೂರ್ಣ ಉಲ್ಲಂಘನೆ: ಕೆಂಭಾವಿ ಪಟ್ಟಣದಲ್ಲಿರುವ ಸಾಯಿ ಪಬ್ಲಿಕ್ ಶಾಲೆ, ಹೋಲಿಫೇಥ್ (Holy Faith) ಶಾಲೆ, ವಿದ್ಯಾಲಕ್ಷ್ಮಿ ಶಾಲೆ, ಜ್ಞಾನದೀಪ ಶಾಲೆ ಹಾಗೂ ವಿದ್ಯಾವಿಕಾಸ ಶಾಲೆಗಳು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಹಾಸ್ಟೇಲ್‌ಗಳನ್ನು ನಡೆಸುತ್ತಿವೆ.ಅನುಮತಿ ರಹಿತವಾಗಿ ಹಾಸ್ಟೇಲ್ ನಡೆಸುತ್ತಿರುವ ಈ ಆಡಳಿತ ಮಂಡಳಿಗಳು, ಪೋಷಕರಿಂದ ವಸತಿ ಹಾಗೂ ಊಟದ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿವೆ.

ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನಾರ್ಹ: ಅನಧಿಕೃತ ಹಾಸ್ಟೇಲ್‌ಗಳಲ್ಲಿ ಕನಿಷ್ಠ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳಿಲ್ಲ. ನಾಳೆ ಅನಾಹುತ ಸಂಭವಿಸಿ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾದರೆ ಅದಕ್ಕೆ ಯಾರು ಹೊಣೆ ಎಂದು ಸಂಘಟನೆ ಪ್ರಶ್ನಿಸಿದೆ.
ಶಾಲೆಗಳು ನಿಯಮ ಉಲ್ಲಂಘಿಸಿ ದಂಧೆ ನಡೆಸುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


​ಅನಧಿಕೃತವಾಗಿ ಹಾಸ್ಟೇಲ್ ನಡೆಸುವ ಮೂಲಕ ಪೋಷಕರನ್ನು ಸುಲಿಗೆ ಮಾಡುತ್ತಿರುವ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿರುವ ಈ ಖಾಸಗಿ ಶಾಲೆಗಳ ಪರವಾನಗಿಯನ್ನು (Licence) ತಕ್ಷಣವೇ ರದ್ದುಗೊಳಿಸಬೇಕು. ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿರುವ ಆಡಳಿತ ಮಂಡಳಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
​ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿರುವ ಮಾದಿಗ ಯುವಸೇನೆ ಅಧ್ಯಕ್ಷ ಮಲ್ಲು ವಠಾರ ಅವರು, ತಕ್ಷಣವೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Share with Friends
author avatar
Digital Desk