ಮಣಿಪುರ ಮತ್ತೆ ಉದ್ವಿಗ್ನ, ಗುಂಡಿಕ್ಕಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ
ಮಣಿಪುರ : ಕಕ್ಚಿಂಗ್ ಜಿಲ್ಲೆಯಲ್ಲಿ ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಶನಿವಾರ ಸಂಜೆ ಕೆಲವು ಅಪರಿಚಿತ ಬಂದೂಕುಧಾರಿಗಳು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದರು. ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಕಾಕ್ಚಿಂಗ್-ವಾಬಗೈ ರಸ್ತೆಯ ಕೀರಾಕ್‌ನಲ್ಲಿರುವ ಪಂಚಾಯತ್ ಕಚೇರಿ ಬಳಿ ಸಂಜೆ 5.20 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮೃತ ಕಾರ್ಮಿಕರು ಇಬ್ಬರೂ ಬಿಹಾರದ ನಿವಾಸಿಗಳಾಗಿದ್ದು, ಅವರನ್ನು ಗೋಪಾಲ್‌ಗಂಜ್ ಜಿಲ್ಲೆಯ ರಾಜವಾಹಿ ಗ್ರಾಮದ ನಿವಾಸಿಗಳಾದ ಸುನಾಲಾಲ್ ಕುಮಾರ್ (18) ಮತ್ತು ದಶರತ್ ಕುಮಾರ್ (17) ಎಂದು ಗುರುತಿಸಲಾಗಿದೆ. ಇಬ್ಬರೂ ಕಟ್ಟಡ ಕಾರ್ಮಿಕರಾಗಿದ್ದು, ಮೈಥಿ ಪ್ರಾಬಲ್ಯದ ಕಕ್ಚಿಂಗ್ ಜಿಲ್ಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಯ ಹಿಂದಿನ ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಈ ಘಟನೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಪೊಲೀಸರು ಅಕ್ಕಪಕ್ಕದ ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಬಂದು ಹೋಗುವವರ ಮೇಲೆ ನಿಗಾ ಇಡಲಾಗಿದೆ.
