
ರೈತರ ಸಾಲ ಮನ್ನಾ ಮಾಡಿ..ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ರಚಿಸಿ
ಬೆಂಗಳೂರು, ಜು.8: ಬರ ಮತ್ತು ಪ್ರವಾಹದಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಎಲ್ಲಾ ರೈತರಿಗೆ ಕನಿಷ್ಠ 50 ಸಾವಿರ ರೂ. ವರೆಗಿನ ಸಾಲಮನ್ನಾವನ್ನು ತಕ್ಷಣವೇ ಘೋಷಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿರುವ ಅವರು, ಲಭ್ಯವಿರುವ ತುರ್ತು ನಿಧಿಯಿಂದ ತಕ್ಷಣವೇ ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ, ಯಾರೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಇನ್ನು ಪ್ರತಿ ತಾಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ಕಾರ್ಯಗಳ ಉಸ್ತುವಾರಿ ವಹಿಸಬೇಕು,ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಅನುದಾನ ಬಿಡುಗಡೆ ಮಾಡಿ, ಪರಿಹಾರ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು, ಬೆಳೆಹಾನಿ ಸಮೀಕ್ಷೆ ಚುರುಕು: ಬೆಳೆಹಾನಿ ಸಮೀಕ್ಷೆಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ, ರಾಜ್ಯಕ್ಕೆ ಸಿಗಬೇಕಾದ ಕೇಂದ್ರದ ನೆರವನ್ನು ಶೀಘ್ರವಾಗಿ ಪಡೆದುಕೊಳ್ಳಲು ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರುಗಳು ತಕ್ಷಣವೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು.ಜೊತೆಗೆ ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತ ಆರೋಪಗಳನ್ನು ಬದಿಗಿಟ್ಟು, ತನ್ನ ಆಡಳಿತಾತ್ಮಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮುಖ್ಯಮಂತ್ರಿಗಳು ತಾವು ನೀಡಿರುವ ರೈತರ ಸಾಲಮನ್ನಾ ಭರವಸೆಯನ್ನು ತಕ್ಷಣವೇ ಈಡೇರಿಸಿ ಸಂತ್ರಸ್ತ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
