
ಆಷಾಢ ಮಾಸದೊಳಗೆ ಸಂಪುಟ ವಿಸ್ತರಣೆ ಅನುಮಾನ?
ಬೆಂಗಳೂರು, ಜು.8 : ಆಷಾಢ ಮಾಸದೊಳಗೆ ಸಂಪುಟ ವಿಸ್ತರಣೆ ಬಹುತೇಕ ಅನುಮಾನವಾಗಿದ್ದುಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭಾರೀ ನಿರಾಸೆ ಉಂಟಾಗಿದೆ.ಜೊತೆಗೆ ಹಲವು ಶಾಸಕರ ದೆಹಲಿ ದಂಡಯಾತ್ರೆಗೂ ಬ್ರೇಕ್ ಬಿದ್ದಿದೆ.
ಜುಲೈ 15ರೊಳಗೆ ಸಂಪುಟ ವಿಸ್ತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಅಲ್ಲದೆ, ಇನ್ನೇರಡು ದಿನ ದೆಹಲಿಗೆ ತೆರಳಲು ನಿರ್ಧರಿಸಿದ್ದರು.ಆದರೆ ಇದೀಗ ಸಿಎಂ ದೆಹಲಿ ಪ್ರವಾಸಕ್ಕೂ ಬ್ರೇಕ್ ಬಿದ್ದಿದೆ. ಪ್ರಸುತ್ತ ವಿದೇಶ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆಯೇ ಭಾರತಕ್ಕೆ ಮರಳಬೇಕಾಗಿತ್ತು.ಆದರೆ ನಾಳೆ ಬದಲಿಗೆ ರಾಹುಲ್ ಜು.12 ರಂದು ಹಿಂದಿರುಗುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ದಂಡಯಾತ್ರೆ ಹಾಗೂ ಸಂಪುಟ ವಿಸ್ತರಣೆ ತಡವಾಗಲಿದೆ ಎಂದು ತಿಳಿದು ಬಂದಿದೆ.
ಆಷಾಢದೊಳಗೆ ಸಂಪುಟ ವಿಸ್ತರಣೆಗೆ ಒಲವು ತೋರಿದ್ದ ಡಿ.ಕೆ.ಶಿವಕುಮಾರ್ ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದರು.ಅಂದುಕೊಂಡಂತೆ ನಾಳೆಯೇ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಜೊತೆ ಡಿಕೆಶಿ ದೆಹಲಿ ಪ್ರವಾಸ ಕೈಗೊಳ್ಳಬೇಕಾಗಿತ್ತು ಎನ್ನಲಾಗಿದೆ.ಆದರೆ ರಾಹುಲ್ ಗಾಂಧಿ ಜು.12 ರಂದು ವಿದೇಶದಿಂದ ಹಿಂದಿರುಗುತ್ತಿರುವುದರಿಂದ ಮೂವರ ದೆಹಲಿ ಭೇಟಿ ಹಾಗೂ ಸಂಪುಟ ವಿಸ್ತರಣೆಗೆ ಬ್ರೇಕ್ ಬಿದ್ದಿದೆ.
ಇನ್ನು ಜು.13 ಅಥವಾ 14 ರಂದು ಸಿಎಂ ಡಿ.ಕೆ.ಶಿವಕುಮಾರ್ ,ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜೊತೆ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದೇ ವೇಳೆ ಹಿರಿಯ-ಕಿರಿಯ ಶಾಸಕರನ್ನು ಒಳಗೊಂಡ 20 ಮಂದಿ ಪಟ್ಟಿಯನ್ನು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಸಿದ್ದಪಡಿಸಿಕೊಂಡಿದ್ದು, ಆ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟು ಅಂಕಿತ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.
ಇದಲ್ಲದೆ, ಜಾತಿವಾರು, ಪ್ರಾಂತವಾರು, ಜಿಲ್ಲಾವಾರು,ಪ್ರಾದೇಶಿಕವಾರು ಸೇರಿದಂತೆ ಹಲವು ಮಾನದಂಡಗಳನ್ನು ಇಟ್ಟುಕೊಂಡು ೨೦ ಮಂದಿಯ ಪಟ್ಟಿ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಆಷಾಢದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ದೆಹಲಿ ವಿಮಾನ ಏರಲು ಸಜ್ಜಾಗಿದ್ದ ಮಾಜಿ ಸಚಿವರು, ಶಾಸಕರಿಗೆ ಭಾರೀ ನಿರಾಸೆಯುಂಟಾಗಿದ್ದು, ಜು.೧೩ ರ ನಂತರ ದೆಹಲ ದಂಡಯಾತ್ರೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.
