Latestರಾಜಕೀಯ | Politicsರಾಜ್ಯ-Karnataka

ರೈತರ ಖಾತೆಗೆ ತಕ್ಷಣ ₹25 ಸಾವಿರ ಪರಿಹಾರ ಜಮೆ ಮಾಡುವಂತೆ ನಡಹಳ್ಳಿ ಆಗ್ರಹ

ವಿಜಯಪುರ: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರ ಖಾತೆಗೆ ತಕ್ಷಣ ₹25 ಸಾವಿರ ಪರಿಹಾರ ಜಮೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರೈತರ ಸಾಲಮನ್ನಾ ಮಾಡಬೇಕು. ಬೆಳೆ ವಿಮೆ ಕಟ್ಟಿರುವ ರೈತರಿಗೆ ವಿಮಾ ಕಂಪನಿಗಳಿಂದ ಮೊದಲ ಕಂತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

“2023ರಲ್ಲಿ ಬರಗಾಲ ಎದುರಾಗಿತ್ತು. ಇದೀಗ ಎರಡನೇ ಬಾರಿಗೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯ ಸರ್ಕಾರ ಬರಗಾಲದ ಮಾನದಂಡಗಳನ್ನು ಸರಿಯಾಗಿ ಪರಿಗಣಿಸದೆ ಕೇವಲ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ” ಎಂದು ನಡಹಳ್ಳಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಶೇ.30ರಷ್ಟು ಮಾತ್ರ ಮಳೆಯಾಗಿದ್ದು, 190 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಕಂದಾಯ ಸಚಿವರು ಹೇಳುತ್ತಾರೆ. ಆದರೆ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಕರ್ನಾಟಕದ 91 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಕೇವಲ 21 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಪ್ರವಾಸ ಕೈಗೊಂಡು ಬರ ವೀಕ್ಷಣೆ ಮಾಡಿದರೂ, ಅಧಿಕಾರಿಗಳು ಸಮರ್ಪಕವಾಗಿ ಬರ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಬರಗಾಲ ಘೋಷಣೆಯಲ್ಲಿ ಭಾರಿ ವ್ಯತ್ಯಾಸವಾಗಿದೆ ಎಂದು ನಡಹಳ್ಳಿ ಹೇಳಿದ್ದಾರೆ.

ಮುಖ್ಯಮಂತ್ರಿ ಅವರು ಕೇವಲ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಕೆಲ ಸಚಿವರು ಫೋಟೊಶೂಟ್ ಮಾಡಿಕೊಂಡು ಬಂದಿದ್ದನ್ನು ಹೊರತುಪಡಿಸಿ ರೈತರಿಗೆ ಯಾವುದೇ ನೆರವು ದೊರೆತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ನಿಯಮಾವಳಿಗಳು ಬರ ಘೋಷಣೆಗೆ ಅಡ್ಡಿಯಾಗುತ್ತಿವೆ ಎಂಬ ರಾಜ್ಯ ಸರ್ಕಾರದ ಹೇಳಿಕೆ ಸರಿಯಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಎ.ಎಸ್. ಪಾಟೀಲ ನಡಹಳ್ಳಿ ಒತ್ತಾಯಿಸಿದ್ದಾರೆ.

Share with Friends
author avatar
Digital Desk