Latestಮಂಡ್ಯ-Mandya

ಯುವಕನ ಕೊಲೆ ರಹಸ್ಯ ಕೊಲೆಗಾರನ ಸುಳಿವು ಕೊಟ್ಟ ಶ್ವಾನ..!

ಮಂಡ್ಯ ,ಜು.23: ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಯುವಕನ ಕೊಲೆ ರಹಸ್ಯ ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಗಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ನಿವಾಸಿ ಕಾರ್ಪೆಂಟರ್ ರಾಕೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಪ್ರಕರಣದಲ್ಲಿ ಅದೇ ಗ್ರಾಮದ ಅಂಬರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಊಟಕ್ಕೆ ಹಣ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜೊತೆಗೆ ತನ್ನ ಕೆಲಸ ಮಾಡುತ್ತಿದ್ದ ರಾಕೇಶ್‌ನನ್ನು ಕಲ್ಲು ಎತ್ತಿಹಾಕಿ ಅಂಬರೀಶ್ ಕೊಲೆ ಮಾಡಿದ್ದಾನೆಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತ ರಾಕೇಶ್ ಮತ್ತು ಆರೋಪಿ ಅಂಬರೀಶ್ ಇಬ್ಬರೂ ಒಟ್ಟಿಗೆ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಇಬ್ಬರೂ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿ ವಾಪಸ್ ಊರಿಗೆ ಹಿಂದಿರುಗುವ ವೇಳೆ ಮಳೆ ಬಂದ ಹಿನ್ನೆಲೆ ಇಬ್ಬರೂ ಕೆ.ಆರ್.ಎಸ್ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಬಸ್ ನಿಲ್ದಾಣದಲ್ಲಿ ರಾಕೇಶ್ ತನ್ನ ಪ್ರೇಯಸಿ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತ ಅಲ್ಲೇ ಮಲಗಿಕೊಂಡಿದ್ದ. ಈ ವೇಳೆ ಬೇಗ ಊರಿಗೆ ಹೋಗೋಣ ಬಾ ಎಂದು ಅಂಬರೀಶ್ ಪಟ್ಟು ಹಿಡಿದಿದ್ದಾನೆ. ಆದರೆ ರಾಕೇಶ್ ಬಾರದಿದ್ದಕ್ಕೆ ಮತ್ತು ಊಟಕ್ಕೆ ಹಣ ನೀಡಲಿಲ್ಲ ಎಂಬ ಆಕ್ರೋಶದಿಂದ ಕೋಪಗೊಂಡ ಅಂಬರೀಶ್, ರಾಕೇಶ್ ತಲೆಗೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿದ್ದಾನೆ.

ಕೊಲೆ ಮಾಡಿದ ಬಳಿಕ ಬಸ್ ಹತ್ತಿ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಅಂಬರೀಶ್ ಪರಾರಿಯಾಗಿದ್ದ.ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಂಬರೀಶ್,ತನಿಖೆಯ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಸುಳ್ಳು ಕಥೆ ಕಟ್ಟಿದ್ದ.ರಾಕೇಶ್ ಪ್ರೇಯಸಿ ಕಡೆಯವರಿಬ್ಬರು ಬಂದು ಆತನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಮುಂದೆ ಬಿಂಬಿಸಲು ಯತ್ನಿಸಿದ್ದ.ಸ್ಥಳದಲ್ಲಿ ಮೃತನ ಬೈಕ್ ಮಾತ್ರ ಪತ್ತೆಯಾಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಾಗಿತ್ತು.ಆದರೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಶ್ವಾನ ದಳ ಪ್ರಮುಖ ಪಾತ್ರವಹಿಸಿದೆ. ಶ್ವಾನವು ಸ್ಥಳದಿಂದ ನೇರವಾಗಿ ಆರೋಪಿ ಅಂಬರೀಶ್ ಬಳಿ ತೆರಳಿತು. ಅಂಬರೀಶ್ ಧರಿಸಿದ್ದ ಚಪ್ಪಲಿ ಹಾಗೂ ಬಟ್ಟೆಯಲ್ಲಿದ್ದ ರಕ್ತದ ಕಲೆಗಳನ್ನು ಗುರುತಿಸುವ ಮೂಲಕ ಈತನೇ ಅಸಲಿ ಕೊಲೆಗಾರ ಎಂದು ಶ್ವಾನದಳ ನಿಖರವಾಗಿ ಪತ್ತೆ ಮಾಡಿತು. ಕೂಡಲೇ ಎಚ್ಚೆತ್ತ ಕೆ.ಆರ್.ಎಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿ ಅಂಬರೀಶ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share with Friends
author avatar
Digital Desk