Top Storiesಗದಗ-Gadag

ಪ್ರಾಚೀನ ದೇವಾಲಯ ರಹಸ್ಯ’ ಪುಸ್ತಕ ಓದಿ ನಿಧಿ ಕಳ್ಳತನಕ್ಕೆ ಯತ್ನ..!

​ಗದಗ:ಪ್ರಾಚೀನ ದೇವಾಲಯದ ರಹಸ್ಯ ಪುಸ್ತಕ ಓದಿ, ನಿಧಿಯ ಆಸೆಗೆ ಬಿದ್ದು ಐತಿಹಾಸಿಕ ದೇವಾಲಯದ ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದ ನಾಲ್ವರು ಖದೀಮರನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
​ಗದಗ ನಗರದ ಪ್ರಸಿದ್ಧ ತ್ರಿಕೂಟೇಶ್ವರ ದೇವಸ್ಥಾನದ ಅಂಗಳದಲ್ಲಿರುವ 11 ನೇ ಶತಮಾನದ ಐತಿಹಾಸಿಕ ಸರಸ್ವತಿ ದೇವಾಲಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಹಾಡಹಗಲೇ ಈ ಕೃತ್ಯ ನಡೆದಿತ್ತು. ದೇವಾಲಯಕ್ಕೆ ನುಗ್ಗಿದ್ದ ಖದೀಮರು, ನಿಧಿ ಹಾಗೂ ಬಂಗಾರದ ಆಸೆಯಿಂದ ದೇವಿ ವಿಗ್ರಹವನ್ನು ಹಾಳುಮಾಡಿದ್ದರು.

ಬೆಳಗಾವಿ ಮೂಲದ ಬಾಳೇಶ್ ಕಳಸಣ್ಣವರ್ (ಮಾಸ್ಟರ್ ಮೈಂಡ್), ಆಸೀಫ್ ಭಾಗವಾನ್, ಬಸು ಸೆಂಡೂರ್ ಮತ್ತು ರಾಜೇಸಾಬ್ ನದಾಫ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೋರ್ಡ್ ಇಲ್ಲದ ಎರ್ಟಿಗಾ ಕಾರು ಹಾಗೂ ಟೂಲ್ ಕಿಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಮಾಸ್ಟರ್ ಮೈಂಡ್ ಬಾಳೇಶ್, ಒಂದು ತಿಂಗಳ ಹಿಂದೆಯೇ ಗೋಕಾಕ್‌ನಿಂದ ಗದಗ ನಗರಕ್ಕೆ ಬಂದಿದ್ದನು. ‘ಪ್ರಾಚೀನ ದೇವಾಲಯ ರಹಸ್ಯ’ ಎಂಬ ಪುಸ್ತಕವನ್ನು ಖರೀದಿಸಿ, ದೇವಸ್ಥಾನಗಳಲ್ಲಿ ನಿಧಿ ಎಲ್ಲಿರುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದನು. ನಂತರ ದೇವಾಲಯಕ್ಕೆ ಎಂಟ್ರಿ ಕೊಟ್ಟು, ಯಾವ ಹೊತ್ತಿನಲ್ಲಿ ಜನಸಂದಣಿ ಕಡಿಮೆಯಿರುತ್ತದೆ ಎಂದು ನಿಖರವಾಗಿ ವೀಕ್ಷಣೆ (ರೆಕ್ಕೆ) ಮಾಡಿದ್ದನು.

ಯೋಜನೆ ಪ್ರಕಾರ, ನಂಬರ್ ಬೋರ್ಡ್ ಇಲ್ಲದ ಎರ್ಟಿಗಾ ಕಾರಿನಲ್ಲಿ ನಾಲ್ವರ ತಂಡ ಬಂದು ಕೃತ್ಯ ಎಸಗಿದೆ. ‘ವಿಗ್ರಹದ ಜಾಯಿಂಟ್ ಭಾಗದಲ್ಲಿ ಚಿನ್ನ ಅಡಗಿರುತ್ತದೆ’ ಎಂಬ ನಂಬಿಕೆಯಿಂದ ದೇವಿಯ ಎದೆಯ ಭಾಗವನ್ನು ಟೂಲ್‌ಗಳಿಂದ ಕೆತ್ತಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಆದರೆ ಯಾವುದೇ ನಿಧಿಯ ಸುಳಿವು ಸಿಗದಿದ್ದಾಗ ಅಲ್ಲಿಂದ ಎಸ್ಕೇಪ್ ಆಗಿದ್ದರು.

ದೇವಸ್ಥಾನದ ಮೂರ್ತಿ ವಿರೂಪಗೊಂಡಿದ್ದರಿಂದ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ (Technical Evidence) ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ.
​”ಪ್ರಾಚೀನ ದೇವಸ್ಥಾನ ಹಾಗೂ ಐತಿಹಾಸಿಕ ಪರಂಪರೆಯನ್ನು ಹಾಳುಗೆಡವಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಬಿ.ಎಸ್. ನೇಮಗೌಡ ಖಡಕ್ ಸಂದೇಶ ನೀಡಿದ್ದಾರೆ.

Share with Friends
author avatar
Digital Desk