
ಟ್ರಾಫಿಕ್ ಸಿಗ್ನಲ್ಗಳಲ್ಲಿ ಹಂಪ್ಸ್ ಅಳವಡಿಕೆಗೆ ಒತ್ತಾಯಿಸಿ ಪ್ರತಿಭಟನೆ..!
ರಾಯಚೂರು / ಲಿಂಗಸುಗೂರು:ಪಟ್ಟಣದ ಹೃದಯ ಭಾಗವಾಗಿರುವ ಬಸ್ ನಿಲ್ದಾಣ ವೃತ್ತ (ಅಂಬೇಡ್ಕರ್ ಸರ್ಕಲ್) ಹಾಗೂ ಐಎಂಎ ಹಾಲ್ ಹತ್ತಿರ ಟ್ರಾಫಿಕ್ ಸಿಗ್ನಲ್ಗಳು ಹಾಗೂ ರಬ್ಬರ್ ಹಂಪ್ಸ್ಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ ನೇತೃತ್ವದಲ್ಲಿ ಕಾರ್ಯಕರ್ತರು ಬಸ್ ನಿಲ್ದಾಣ ವೃತ್ತದ ನಾಲ್ಕು ಕಡೆಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಪ್ರತಿದಿನ ಅಂಬೇಡ್ಕರ್ ವೃತ್ತದ ಹತ್ತಿರ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದಲ್ಲದೆ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸಂಚರಿಸುತ್ತಾರೆ. ಯಾವುದೇ ತರಹದ ರಸ್ತೆ ತಡೆಗಳು ಇಲ್ಲದ ಕಾರಣ ವಾಹನಗಳನ್ನು ಅತೀ ವೇಗದಿಂದ ಚಲಾಯಿಸಲಾಗುತ್ತದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರು ಜೀವ ಭಯದಿಂದ ಸಂಚರಿಸುವಂತಾಗಿದೆ. ಆದ್ದರಿಂದ ನಾಲ್ಕೂ ರಸ್ತೆಗೆ ರಬ್ಬರ್ ಹಂಪ್ ಹಾಗೂ ಸಂಚಾರ ಸಿಗ್ನಲ್ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರು ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್, ವೇಗ ಮಿತಿ ಸೂಚನಾ ಫಲಕ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ನೀಡದ ಕಾರಣ ಅಂಬೇಡ್ಕರ್ ವೃತ್ತದ ಹತ್ತಿರವಿರುವ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಈ ಪ್ರತಿಭಟನೆಯಲ್ಲಿ ಮಹ್ಮದ್ ಅಜೀರ, ರವಿ ಕುಮಾರ ಬರಗುಡಿ, ಅಜೀಜ ಪಾಷಾ, ಮೋಸಿನ ಖಾನ, ಬಸನಗೌಡ, ಮರಿಯಪ್ಪ, ಮಲ್ಲಣ್ಣಗೌಡ, ರಹಿಮನ್, ವೀರಯ್ಯ ಸ್ವಾಮಿ, ಬಸವರಾಜ ಹಾಗೂ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. ರಸ್ತೆ ಬಂದ್ನಿಂದಾಗಿ ಸಂಚಾರಕ್ಕೆ ಅಡಚಣೆಯುಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಅಧ್ಯಕ್ಷ ಜಿಲಾನಿ ಪಾಷಾ ಅವರನ್ನು ವಶಕ್ಕೆ ಪಡೆದರು.
