
ಭುಗಿಲೆದ್ದ ಬಿಡದಿ ಭೂ ಯುದ್ಧ..ಉದ್ವಿಗ್ನಗೊಂಡ ಮಂಡಲಹಳ್ಳಿ
ಬೆಂಗಳೂರು ದಕ್ಷಿಣ, ಜು.13 : ಬಿಡದಿ ಟೌನ್ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ದಿನೇ ದಿನೇ ವಿರೋಧ ಹೆಚ್ಚಾಗುತ್ತಿದ್ದು, ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿಯಲ್ಲಿ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ.
ಸದ್ಯ ಮಂಡಲಹಳ್ಳಿ ಬಳಿ ಜೆಎಂಸಿ ಸರ್ವೇ ಮಾಡಲು ಜಿಬಿಡಿಎ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಸರ್ವೇ ಕಾರ್ಯ ವಿರೋಧಿಸಿ ರೈತರು ಪ್ರತಿ ಭಟನೆ ನಡೆಸಿದರು.ಆದರೆ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಅಧಿಕಾರಿಗಳು ಮನವಿ ಮಾಡಲು ಯತ್ನಿಸಿದರು.ಆದರೂ ಅಧಿಕಾರಿಗಳ ಮಾತಿಗೆ ಬಗದ ರೈತರು ಅವರ ಕಾರನ್ನು ಸುತ್ತುವರಿದು, ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶ ತಡೆಯಲಾಗಿಲ್ಲ. ಪೊಲೀಸರನ್ನು ಲೆಕ್ಕಿಸದೇ ಅಧಿಕಾರಿಗಳ ಕಾರಿಗೆ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.
ಇದಲ್ಲೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ನಾವು ಸುಮ್ಮನೆ ನೋಡ್ತಾ ಕೂರಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಮನವಿ ಮಾಡಿದ್ದಾರೆ.ಇದೇ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು, ಅಧಿಕಾರಿಗಳನ್ನು ತಮ್ಮ ಭದ್ರತೆಯಲ್ಲಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.ಅಲ್ಲದೆ, ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್, ಶ್ರೀನಿವಾಸ್ ರಿಂದ ಮಾಹಿತಿ ಪಡೆದು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
