LatestTop Storiesವಿದೇಶ-International

ಬ್ರಿಟನ್‌ನಲ್ಲಿ ದಾಖಲೆ ಬಿಸಿಲು, 2700ಕ್ಕೂ ಹೆಚ್ಚು ಸಾವು

ಲಂಡನ್, ಜು,13 :ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ಭೀಕರ ಹವಾಮಾನ ವೈಪರೀತ್ಯಕ್ಕೆ ಬ್ರಿಟನ್ ತತ್ತರಿಸಿ ಹೋಗಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿ ಉಂಟಾದ ಅತಿಯಾದ ಉಷ್ಣ ಅಲೆಗಳಿಗೆ ಬರೋಬ್ಬರಿ 2700ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಅಂದಾಜು ಹೊರಬಿದ್ದಿದೆ.

ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲು

ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್, ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಹವಾಮಾನ ಇಲಾಖೆ ಜಂಟಿಯಾಗಿ ನಡೆಸಿರುವ ಅಧ್ಯಯನದಿಂದ ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ಕಾರಣ ಇಷ್ಟೊಂದು ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ವರದಿಗಳ ಪ್ರಕಾರ, ಇಂಗ್ಲೆಂಡ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಶಾಖ ಹೊಂದಿದ್ದ ಜೂನ್ ತಿಂಗಳು ಇದಾಗಿದೆ. ನಾರ್ಫೋಕ್‌ನ ಲಿಂಗ್‌ವುಡ್‌ನಲ್ಲಿ ತಾಪಮಾನವು ಬರೋಬ್ಬರಿ 37.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮೂಲಕ 1957ರಲ್ಲಿದ್ದ 35.6 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನು ಧೂಳೀಪಟ ಮಾಡಿದೆ. ಅದೇ ರೀತಿ, ಮೇ 26ರಂದು ಕ್ಯೂ ಗಾರ್ಡನ್ಸ್‌ನಲ್ಲಿ 35.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು 1922ರ ದಾಖಲೆಯನ್ನು ಮುರಿದಿದೆ. ಹವಾಮಾನದ ತೀವ್ರತೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಭಾಗಗಳಲ್ಲಿ ಮೊದಲ ಬಾರಿಗೆ ಅಪರೂಪದ ’ರೆಡ್ ಹೀಟ್ ಅಲರ್ಟ್’ (ಕೆಂಪು ಎಚ್ಚರಿಕೆ) ಘೋಷಿಸಲಾಗಿತ್ತು.

ಬ್ರಿಟನ್‌ನಲ್ಲಿ ತಾಪಮಾನ ದಿಢೀರನೆ ಏರಲು ’ಹೀಟ್ ಡೋಮ್’ ಎಂಬ ಹವಾಮಾನ ವಿದ್ಯಮಾನ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ವಾತಾವರಣದಲ್ಲಿ ಹೆಚ್ಚಿನ ಒತ್ತಡದ ವಲಯವೊಂದು ಸೃಷ್ಟಿಯಾಗಿ, ಅದು ಬಿಸಿ ಗಾಳಿಯನ್ನು ಒಂದೇ ಕಡೆ ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದಾಗಿ ಜಾಗತಿಕ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಇದು ಬ್ರಿಟನ್‌ನ ಗರಿಷ್ಠ ತಾಪಮಾನಕ್ಕೆ ಹೆಚ್ಚುವರಿಯಾಗಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಸೇರಿಸಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ನ ಬಹುತೇಕ ಮನೆಗಳು ಚಳಿಗಾಲಕ್ಕೆ ತಕ್ಕಂತೆ, ಅಂದರೆ ಶಾಖವನ್ನು ಒಳಗೇ ಹಿಡಿದಿಟ್ಟುಕೊಳ್ಳುವ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ.ಆದರೆ, ಪ್ರಸ್ತುತ ಉಂಟಾಗಿರುವ ಉಷ್ಣ ಅಲೆ ತಡೆದುಕೊಳ್ಳುವ ಶಕ್ತಿ ಈ ಮನೆಗಳಿಗಿಲ್ಲ. ಅಲ್ಲದೆ, ತಾಪಮಾನ ಹೆಚ್ಚಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತ ಹಾಗೂ ಸ್ಟ್ರೋಕ್‌ನಂತಹ ಮಾರಣಾಂತಿಕ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Share with Friends
author avatar
Digital Desk