BlogLatestTop Storiesರಾಜಕೀಯ | Politics

ಬಿಜೆಪಿ-ಜೆಡಿಎಸ್ ದೋಸ್ತಿಗಳ ‘ಮೈಸೂರು ಚಲೋ’ ಪಾದಯಾತ್ರೆಗೆ ಚಾಲನೆ

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಜೀನಾಮೆಗೆ ಆಗ್ರಹಿಸಿ ಇಂದಿನಿಂದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಆರಂಭವಾಗಿದೆ.
ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್‌ದಾಸ್‌‍ ಅಗರ್ವಾಲ್‌, ಕೇಂದ್ರ ಸಚಿವರಾದ ಶೊಭಾ ಕರಂದ್ಲಾಜೆ, ವಿ.ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್‌‍ ನಾಯಕ ಸಿ.ಬಿ. ಸುರೇಶ್‌ ಬಾಬು, ಮಾಜಿ ಸಚಿವ ಜಿ.ಟಿ. ದೇವೇಗೌಡ, ಕೇಂದ್ರ ಸಚಿವರು, ಕೋರ್‌ ಕಮಿಟಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಪಾದಯಾತ್ರೆ ಆರಂಭವಾಗುವ ಸ್ಥಳದ ಬಳಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸ್‌‍ ವಿಭಾಗದ ಮೂವರು ಇನ್‌ಸ್ಪೆಕ್ಟರ್‌ ಹಾಗೂ 50 ಸಿಬ್ಬಂದಿ ನಿಯೋಜಿಸಲಾಗಿದೆ. ಉಳಿದಂತೆ ಸ್ಥಳದಲ್ಲಿ ಕೆಎಸ್‌‍ಆರ್‌ಪಿ ತುಕಡಿ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾದ ಕೇಂದ್ರ ಸಚಿವ ಹೆಚ್‌ಡಿಕೆ , ಇದು ಜನವಿರೋಧಿ ಸರ್ಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರ್ಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅಕ್ರಮ ಆಸ್ತಿ ಎಂಬ ಡಿಕೆ ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅವರ ಕೈಯಲ್ಲೇ ಇದೆ. ನಾವು ಅಕ್ರಮವಾಗಿ ಆಸ್ತಿ ಮಾಡಿದರೆ ಸರ್ಕಾರ ವಶಪಡಿಸಿಕೊಳ್ಳಲಿ. ಸರ್ಕಾರ ಅವರದ್ದೇ ಇದೆ, ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯ ಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್‌ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಗರಂ :
ಮುಡಾ ಹಗರಣದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ.

ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರುತ್ತಾರೆಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಸಲಹೆ ಕೊಡುತ್ತೇನೆ ಎಂದರು.

Share with Friends
author avatar
News Desk