LatestTop Storiesಬೆಳಗಾವಿ-Belagavi

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ… ಪಾಲಿಕೆ ಗೊತ್ತುವಳಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ..!

ಬೆಳಗಾವಿ : ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪಾಲಿಕೆ ಎದುರು ಭಾರೀ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರೂ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸುವಂತೆ ಆಗ್ರಹಿಸಿದರು. ಸರ್ಕಾರದ ಸೂಚನೆಗಾಗಿ ಕಾಯುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಚಾರದಲ್ಲಿ ಮಹಾನಗರ ಪಾಲಿಕೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಇನ್ನು ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹದೇವ ತಳವಾರ, ಇಂದು ಪಾಲಿಕೆಯಲ್ಲಿ ಗೊತ್ತುವಳಿ ಅಂಗೀಕಾರವಾಗಲಿದೆ ಎಂಬ ವಿಶ್ವಾಸದಿಂದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಲು ಬಂದಿದ್ದೇವೆ. ಆದರೆ ಮೇಯರ್ ಹಾಗೂ ಉಪಮೇಯರ್ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ಕನ್ನಡಪರ ಸಂಘಟನೆಗಳಿಗೆ ತೀವ್ರ ಅಸಮಾಧಾನ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಾವಿರ ಭಾಷೆ ತಲೆಯಲ್ಲಿ ಇರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ” ಎಂಬ ಘೋಷಣೆ ಮೊಳಗಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಬೆಳಗಾವಿ ಕರ್ನಾಟಕದ ನೆಲ… ಕರ್ನಾಟಕದ ಹೆಮ್ಮೆ… ಈ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಕರ್ನಾಟಕದ ಪರ ಗೊತ್ತುವಳಿ ಅಂಗೀಕರಿಸಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಅಧಿಕೃತವಾಗಿ ದಾಖಲಿಸಬೇಕು ಎಂಬುದು ಸಂಘಟನೆಗಳ ಸ್ಪಷ್ಟ ಆಗ್ರಹವಾಗಿದೆ.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡರು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು, ಪ್ರತಿಭಟನಾ ಸ್ಥಳದಿಂದ ಕರೆದುಕೊಂಡು ಹೋದರು..

Share with Friends
author avatar
Digital Desk