LatestTop Storiesಬೆಳಗಾವಿ-Belagavi

ರೈತರ ಹೊಲಗಳಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ..

ಬೆಳಗಾವಿ : ರೈತರ ಹೊಲಗಳಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತಿದೆ.
ಬೆಳಗಾವಿ ತಾಲೂಕಿನ ಸೂಳೇಭಾವಿ ಗ್ರಾಮದ ಸುಮಾರು 300 ರೈತರ ಹೊಲಗಳಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಹೊಲದಿಂದ ಹೊರತೆಗೆದು ಮಾರುಕಟ್ಟೆಗೆ ಸಾಗಿಸಲು ದಾರಿಯೇ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಸಮಸ್ಯೆ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಂಡಾಗಲೂ ಸೂಕ್ತ ಸ್ಪಂದನೆ ಸಿಗದೆ, ಉಡಾಫೆ ಉತ್ತರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
“ರೈತರು ಮತ್ತು ಕಾರ್ಮಿಕರು ಇದ್ದಾಗ ಮಾತ್ರ ಸರ್ಕಾರದ ಅಸ್ತಿತ್ವಕ್ಕೆ ಅರ್ಥ. ಆದರೆ ರೈತರ ಸಮಸ್ಯೆ ಬಂದಾಗ ಸರ್ಕಾರ ಹಾಗೂ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ?” ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಪ್ರಶ್ನಿಸಿದೆ.

ಚುನಾವಣೆ ಸಂದರ್ಭದಲ್ಲಿ ರೈತರು ಮತ್ತು ಕಾರ್ಮಿಕರ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗುತ್ತದೆ. ಆದರೆ ಚುನಾವಣೆ ಮುಗಿದ ಬಳಿಕ ನೀಡಿದ ಭರವಸೆಗಳು ಜಾರಿಯಾಗುತ್ತಿಲ್ಲ ಎಂಬ ಬೇಸರವನ್ನು ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.
ಸೂಳೇಭಾವಿ ಗ್ರಾಮದ 300 ರೈತರ ಹೊಲಗಳಿಗೆ ತಕ್ಷಣ ರಸ್ತೆ ವ್ಯವಸ್ಥೆ ಕಲ್ಪಿಸಬೇಕು, ರೈತರ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹಿಸಿದೆ.

Share with Friends
author avatar
Digital Desk