LatestTop Storiesಕೋಲಾರ-Kolara

ಶ್ರೀನಿವಾಸಪುರ ಗಡಿಯಲ್ಲಿ ವಿವಾದ – ಅಕ್ರಮ ಗಡಿಕಲ್ಲು ತೆರವಿಗೆ ಕನ್ನಡಪರ ಸಂಘಟನೆಗಳ ಬೃಹತ್ ಪ್ರತಿಭಟನೆ

ಕೋಲಾರ, ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ಮರಸನಪಲ್ಲಿ ಗಡಿ ಭಾಗದಲ್ಲಿ ವಿವಾದಭುಗಿಲೆದ್ದಿದೆ. ಕರ್ನಾಟಕದ ಗಡಿ ಪ್ರದೇಶದೊಳಗೆ ಸುಮಾರು 0.5 ಕಿ.ಮೀ. ಅಕ್ರಮವಾಗಿ ಗಡಿಕಲ್ಲು/ಮೈಲುಗಲ್ಲು ನೆಟ್ಟಿರುವುದನ್ನು ಆರೋಪಿಸಿ ಇಂದು ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿನಾಡಧ್ವಜಗಳನ್ನು ಹಿಡಿದು ಶ್ರೀನಿವಾಸಪುರದಿಂದ ಮರಸನಪಲ್ಲಿ ಗಡಿಯವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಗಡಿ ಭಾಗದಲ್ಲಿ ನಾಡಧ್ವಜ ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಕರ್ನಾಟಕದ ಸಾರ್ವಭೌಮತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟರು:

  1. ತಕ್ಷಣ ತೆರವು: ಅಕ್ರಮವಾಗಿ ನೆಟ್ಟಿರುವ ಗಡಿಕಲ್ಲುಗಳನ್ನು ತಕ್ಷಣ ತೆರವುಗೊಳಿಸಿ ಮೂಲ ಗಡಿ ಭಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು
  2. ಕಾನೂನು ಕ್ರಮ: ಅಕ್ರಮವಾಗಿ ಗಡಿಕಲ್ಲು ನೆಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು
  3. ಕ್ಷಮೆಯಾಚನೆ: ತಪ್ಪಿತಸ್ಥರಿಂದ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು
  4. ಅಧಿಕಾರಿಗಳ ಭೇಟಿ: ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು

ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಿಗಿ ಬಂದೋಬಸ್ತ್ನಡುವೆ ಹೋರಾಟ ಶಾಂತಿಯುತವಾಗಿ ನಡೆಯಿತು.ಗಡಿ ವಿವಾದದಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಶೀಘ್ರ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

Share with Friends
author avatar
Digital Desk