
ಜೈಲು ಡಿಐಜಿ ಸೋಮಶೇಖರ್ ಪ್ರಕರಣ ;ಕೈದಿಗಳ ಬಿಡುಗಡೆ ದಾಖಲೆ ಪರಿಶೀಲನೆ..
ಬೆಂಗಳೂರು.ಅ.7- ಸುಪ್ರೀಂ ಕೋರ್ಟ್ ಆದೇಶದ ನಕಲು ಸಲ್ಲಿಸಿ ಕೈದಿಯೊಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂಬ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
2019ರಿಂದ 2022ರವರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಡಿಐಜಿಯಾಗಿದ್ದ ಸೋಮಶೇಖರ್ ಅವರ ಅವಧಿಯಲ್ಲಿ ಬಿಡುಗಡೆಯಾದ ಕೈದಿಗಳ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಆ ಅವಧಿಯಲ್ಲಿ ಬಿಡುಗಡೆಯಾದ ಪ್ರತಿಯೊಬ್ಬ ಕೈದಿಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಬಿಡುಗಡೆಗೆ ಆಧಾರವಾಗಿದ್ದ ನ್ಯಾಯಾಲಯದ ಆದೇಶಗಳ ಪ್ರತಿಗಳನ್ನು ಪರಿಶೀಲಿಸಲಾಗುತ್ತಿದೆ.
ಯಾವ ನ್ಯಾಯಾಲಯದ ಆದೇಶದ ಮೇರೆಗೆ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು, ಆದೇಶದ ಪ್ರತಿ ಅಧಿಕೃತವಾಗಿತ್ತೇ, ಬಿಡುಗಡೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
ಸನ್ನಡತೆ ಆಧಾರದ ಬಿಡುಗಡೆ ಮೇಲೂ ನಿಗಾ:
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸನ್ನಡತೆ ಆಧಾರದ ಮೇಲೆ ಅರ್ಹ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿಯೂ ಸೋಮಶೇಖರ್ ಅವಧಿಯಲ್ಲಿ ಬಿಡುಗಡೆಯಾದ ಕೈದಿಗಳ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆ ಸಂದರ್ಭದಲ್ಲಿ ಶಿಫಾರಸು ಅಥವಾ ರೆಫರ್ ಮಾಡಲಾಗಿದ್ದ ಕೈದಿಗಳು ಯಾರು, ಅವರ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ನಿಯಮಾನುಸಾರ ಪ್ರಕ್ರಿಯೆ ನಡೆದಿದೆಯೇ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಸೋಮಶೇಖರ್ಅವಧಿಯಲ್ಲಿ ಬಿಡುಗಡೆಯಾದ ಕೈದಿಗಳ ಪೈಕಿ ಯಾರಾದರೂ ನಿಯಮಬಾಹಿರವಾಗಿ ಬಿಡುಗಡೆಯಾಗಿದ್ದಾರೆಯೇ ಎಂಬುದನ್ನು ದಾಖಲೆಗಳ ಆಧಾರದ ಮೇಲೆ ಖಚಿತಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಪ್ರತಿಯೊಬ್ಬ ಕೈದಿಯ ಬಿಡುಗಡೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶ, ಜೈಲು ದಾಖಲೆಗಳು ಹಾಗೂ ಸಂಬಂಧಿತ ಕಡತಗಳನ್ನು ಪರಿಶೀಲಿಸಿದ ಬಳಿಕವೇ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರಲಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
