
ಚೀನಾದ ಶೂ ರಾಜಧಾನಿಯಲ್ಲಿ ಅಗ್ನಿ ಅವಘಡ : ೨೮ ಮಂದಿ ಸಜೀವ ದಹನ
ಬೀಜಿಂಗ್,(ಚೀನಾ),ಜು.೧೦: ಆಗ್ನೇಯ ಚೀನಾದ ಜಿಂಜಿಯಾಂಗ್ನ ಶೂ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಕನಿಷ್ಟ ೨೮ ಮಂದಿ ಸಾವು ಕಂಡಿದ್ದಾರೆ.
ಸದ್ಯ ಶೂ ಕಾರ್ಖಾನೆಯ ಬೆಂಕಿ ಅವಘಡದಿಂದ ಭಾರೀ ಪ್ರಮಾಣದ ಹೊಗೆ ಎದ್ದಿದ್ದು,ವಣಿ ಮೇಲೆ ಜನರು ಸಿಲುಕಿದ್ದಾರೆನ್ನಲಾಗಿದೆ.ಆದರೆ ಈ ಅವಘಡದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದ ವೇಳೆ ಕಾರ್ಖಾನೆಯಲ್ಲಿ ಸುಮಾರು ೨೪೦ ಜನರಿದ್ದರು. ಅದರಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ೨೦೦ ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.ನೂರಾರು ರಕ್ಷಣಾ ಕಾರ್ಯಕರ್ತರು ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ.

ಇದೇ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ,ನಿರ್ಲಕ್ಷ್ಯ ತೋರಿ ಈ ಸಾವುನೋವುಗಳಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಲಾಗುವುದು.ಜೊತೆಗೆ ಈ ವರ್ಷ ದೇಶದಲ್ಲಿ ಹಲವಾರು ಪ್ರಮುಖ ಕೈಗಾರಿಕೆಗಳಲ್ಲಿ ಅಪಘಾತಗಳು ಸಂಭವಿಸಿವೆ. ಇವುಗಳಿಂದ ಚೀನಾದ ಅಧಿಕಾರಿಗಳು ಸುರಕ್ಷತಾ ಕ್ರಮದ ಪಾಠ ಕಲಿಯಬೇಕು. ಕಠಿಣ ಮತ್ತು ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ.
ಈ ನಡುವೆ ಕಾರ್ಖಾನೆಗೆ ಸಂಬಂಧಪಟ್ಟ ಕೆಲವು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಕಂಪನಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
