EntertainmentLatestಸ್ಯಾಂಡಲ್​ವುಡ್-Sandalwood

ಅತ್ಯಾಚಾರ ಆರೋಪ ಮಾಡಿದ ಸ್ಯಾಂಡಲ್‌ವುಡ್ ನಟಿಯ ಸಹೋದರಿ, ಸ್ನೇಹಿತನ ಬಂಧನ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯ ಸಹೋದರಿಗೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಆರೋಪಿ ರಾಘವೇಂದ್ರನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ನಟಿ ಸಹೋದರಿ ನೀಡಿರುವ ದೂರಿನ ಪ್ರಕಾರ, ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ರಾಘವೇಂದ್ರ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತನ್ನ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ರಾಘವೇಂದ್ರ ಸಾಲ ಪಡೆದಿದ್ದಾನೆ ಎಂಬ ಆರೋಪವೂ ಇದೆ.

ಈ ನಡುವೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ರಾಘವೇಂದ್ರನಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ಯುವತಿಗೆ ತಿಳಿದುಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ರಾಘವೇಂದ್ರ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನ್ನ ಮಾತು ಕೇಳದಿದ್ದರೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ನಟಿಯ ಸಹೋದರಿ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ರಾಘವೇಂದ್ರನನ್ನು ಕರೆಸಿ ಖಾಸಗಿ ಫೋಟೊಗಳನ್ನು ಡಿಲೀಟ್ ಮಾಡಿಸಿ, ಬುದ್ಧಿವಾದ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.

ಆದರೆ ಕೆಲ ದಿನಗಳ ಬಳಿಕ ಕೈ ಕೊಯ್ದುಕೊಂಡಿರುವ ಫೋಟೊ ಹಾಗೂ ಖಾಸಗಿ ಫೋಟೊಗಳನ್ನು ಯುವತಿಗೆ ಕಳುಹಿಸಿದ್ದ ರಾಘವೇಂದ್ರ, ತಾನು ಹೇಳಿದ ಸ್ಥಳಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಅಲ್ಲಿಗೆ ತೆರಳಿದಾಗ ಕೈಗೆ ಟೊಮ್ಯಾಟೊ ಸಾಸ್ ಹಾಕಿಕೊಂಡಿರುವುದು ಗೊತ್ತಾಗಿದೆ ಎನ್ನಲಾಗಿದೆ.

ಅಲ್ಲಿಂದ ವಾಪಸ್ ಬರಲು ಯತ್ನಿಸಿದ ಸಂದರ್ಭದಲ್ಲಿ ಖಾಸಗಿ ಫೋಟೊಗಳನ್ನು ತೋರಿಸಿ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರ ಬೆನ್ನಲ್ಲೇ ರಾಘವೇಂದ್ರ ಕೂಡ ನಟಿಯ ಸಹೋದರಿ ವಿರುದ್ಧ ಪ್ರತಿ ದೂರು ನೀಡಿದ್ದಾನೆ. ತನ್ನ ಹಾಗೂ ತನ್ನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಪೊಲೀಸರು ನೋಟಿಸ್ ನೀಡಿದ್ದರೂ ನಟಿಯ ಸಹೋದರಿ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.

ಇದೀಗ ಎರಡೂ ದೂರುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದು, ಅತ್ಯಾಚಾರ ಆರೋಪದ ಪ್ರಕರಣದಲ್ಲಿ ರಾಘವೇಂದ್ರನನ್ನು ಬಂಧಿಸಿದ್ದಾರೆ.

Share with Friends
author avatar
News Desk