
ಕೆಪಿಎಸ್ಸಿ ಕೇಸ್ :ಮತ್ತೆ 8 ದಿನ ಇಡಿ ಕಸ್ಟಡಿಗೆ ಜ್ಞಾನೇಂದ್ರ
ಬೆಂಗಳೂರು,ಸೆ.27 –ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರನನ್ನು ಜಾರಿ ನಿರ್ದೇಶನಾಲಯ ಮತ್ತೆ 8 ದಿನಗಳ ಕಾಲ ಕಸ್ಟಡಿಗೆ ಪಡೆದಿದೆ.
ಇಡಿ ದಾಳಿ ನಡೆಯುವ ಭೀತಿಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಟ್ಯಾಬ್ ವೊಂದನ್ನು ಒಡೆದು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.ಆ ಟ್ಯಾಬ್ನಲ್ಲಿ ನೇಮಕಾತಿಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳು ಇದ್ದವು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಇದೇ ಕಾರಣಕ್ಕೆ ಐಎಎಸ್ ಅಧಿಕಾರಿ ಜ್ಞಾನೇಂದ್ರನನ್ನು ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.
ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕಳುಹಿಸಲು ಇದೇ ಟ್ಯಾಬ್ ಬಳಸಲಾಗಿತ್ತು ಎಂಬ ಆರೋಪವೂ ಇದೆ.ಅಲ್ಲದೆ,ಯಾವ ಅಭ್ಯರ್ಥಿಗಳಿಂದ ಎಷ್ಟು ಹಣ ಬರಬೇಕಿದೆ ಎಂಬುದರ ಪಟ್ಟಿಯೂ ಟ್ಯಾಬ್ನಲ್ಲಿ ದಾಖಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಈ ಮಾಹಿತಿಗಳು ಇಡಿಗೆ ಸಿಗಬಹುದು ಎಂಬ ಆತಂಕದಿಂದಲೇ ಟ್ಯಾಬ್ ಒಡೆದು ಹಾಕಲಾಗಿದೆ ಎಂಬುದು ತನಿಖೆಯಲ್ಲಿನ ಪ್ರಮುಖ ಆರೋಪವಾಗಿದೆ.
