LatestTop Storiesರಾಜಕೀಯ | Politicsರಾಜ್ಯ-Karnataka

ಮತ್ತೊಮ್ಮೆ ಸಂಪುಟ ವಿಸ್ತರಣೆ : ಶಾಸಕರ ಬೇಗುದಿ ಶಮನಕ್ಕೆ ಡಿಕೆಶಿ ಕಸರತ್ತು

ಬೆಂಗಳೂರು, ಆ. 8- ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರನ್ನು ಸಮಾಧಾನಗೊಳಿಸಲು ಸಚಿವ ಸಂಪುಟವನ್ನು ಪುನಾರಚಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚಿಂತನೆ ನಡೆದಿದ್ದು, ಹೈಕಮಾಂಡ್ ಜತೆ ಸಮಾಲೋಚಿಸಿ ಸದ್ಯದಲ್ಲೇ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಅಥವಾ ನಾಳೆ ದೆಹಲಿಗೆ ತೆರಳಲಿದ್ದಾರೆ.ವರಿಷ್ಠರನ್ನು ಭೇಟಿ ಮಾಡಿ ಎಲ್ಲದರ ಬಗ್ಗೆಯೂ ಚರ್ಚಿಸಿ ಮೂರನೇ ಹಂತದ ಸಂಪುಟ ವಿಸ್ತರಣೆ ನಿಗದಿ ಮಾಡುವುದರ ಜೊತೆಗೆ ಹಾಲಿ ಸಂಪುಟದಲ್ಲಿರುವ ಒಂದಿಬ್ಬರನ್ನು ಕೈ ಬಿಟ್ಟು ಅಸಮಾಧಾನಗೊಂಡಿರುವ ಹಿರಿಯ ಶಾಸಕರಿಬ್ಬರನ್ನು ಸಂಪುಟ ಸೇರ್ಪಡೆ ಹಾಗೆಯೇ ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆಸುವರು.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ಸಮಾಧಾನಗೊಳಿಸುವ ಪ್ರಯತ್ನಗಳು ನಡೆದಿವೆಯಾದರೂ ಹಿರಿಯ ಶಾಸಕರು ಮುನಿಸು ತಣ್ಣಿದಿಲ್ಲ. ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ ಈಗ ರಚನೆಯಾಗಿರುವ ಸಂಪುಟದಲ್ಲಿ ಕೊಂಚ ಮಾರ್ಪಾಡು ಮಾಡಿ ಒಂದಿಬ್ಬರನ್ನು ಕೈ ಬಿಟ್ಟು ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಂಡು ಅಸಮಾಧಾನ, ಅತೃಪ್ತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚಿಸುವರು.
ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು ಅಸಮಾಧಾನಗೊಂಡಿರುವುದರಿಂದ ಹಾಗೂ ಸಚಿವ ಸ್ಥಾನ ಪಡೆದಿರುವ ಕೆಲ ಶಾಸಕರು ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದಿರುವುದರಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿಲ್ಲ. ಎಲ್ಲವನ್ನು ಸರಿಪಡಿಸಲು ಹೈಕಮಾಂಡ್ ಜತೆ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಇAದು ಇಲ್ಲ ನಾಳೆ ಅವರು ದೆಹಲಿಗೆ ತೆರಳಿ ವರಿಷ್ಠರೊಡನೆ ಮಾತನಾಡಿ ಈಗಿರುವ ಸಚಿವ ಸಂಪುಟದಲ್ಲಿ 3-4 ಮಂದಿಯನ್ನು ಕೈಬಿಟ್ಟು ಅಸಮಾಧಾನಗೊಂಡಿರುವ ಹಿರಿಯರಿಗೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸುವರು.
ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ನಡೆದಿರುವ ಬೆಳವಣಿಗೆಗಳು, ಖಾತೆ ಹಂಚಿಕೆಯ ಕಗ್ಗಂಟ್ಟು ಮತ್ತೊಮ್ಮೆ ಸಂಪುಟ ವಿಸ್ತರಿಸುವ ಅವಶ್ಯಕತೆ, ಎಲ್ಲದರ ಬಗ್ಗೆಯೂ ಡಿ.ಕೆ. ಶಿವಕುಮಾರ್ ರವರು ಹೈಕಮಾಂಡ್ ಜತೆ ಚರ್ಚೆ ನಡೆಸಿ ಒಂದು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಖಾತೆ ಹಂಚಿಕೆ ಕಗ್ಗಂಟು ಹಾಗೂ ಹಿರಿಯ ಶಾಸಕರ ಅಸಮಾಧಾನ ಶಮನ ಮಾಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಜತೆಯೂ ಸುದೀರ್ಘ ಚರ್ಚೆ ನಡೆಸಿ ಬಿಕ್ಕಟ್ಟು ಶಮನದ ಮಾರ್ಗೋಪಾಯಗಳ ಬಗ್ಗೆ ಸಲಹೆಗಳನ್ನು ಪಡೆದುಕೊಂಡರು ಎಂದು ಹೇಳಲಾಗಿದೆ.
ಹಿರಿಯ ಶಾಸಕರ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೆ ಹೊಸದಾಗಿ ಸಚಿವರಾಗಿರುವ ಎಚ್.ಸಿ. ಬಾಲಕೃಷ್ಣ ಅವರು ಹಿರಿಯರಿಗಾಗಿ ತಮ್ಮ ಸ್ಥಾನ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ಹಾಗೆಯೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಹ ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ತಿಳಿಸಿದ್ದಾರೆ.
ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹಾಲಿ ಸಂಪುಟದಲ್ಲಿರುವ ಇಬ್ಬರನ್ನು ಕೈ ಬಿಟ್ಟು ಹೊಸದಾಗಿ ಒಂದಿಬ್ಬರಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.ಮುಂದಿನ ಅಧಿವೇಶನದೊಳಗೆ ಮತ್ತೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ.
ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಾದ ಹೆಚ್.ಸಿ. ಮಹದೇವಪ್ಪ, ಯುವ ಶಾಸಕರಾಗಿರುವ ಪ್ರಿಯ ಕೃಷ್ಣ ಸೇರಿದಂತೆ ಹಲವರು ಈಗಾಗಲೇ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿ ಮಾಡಿ ತಮಗಾಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಈಗಿನ ಸಚಿವ ಸಂಪುಟದಲ್ಲಿ ಕೆಲ ಮಾರ್ಪಾಡುಗಳಾಗುವ ಸಾಧ್ಯತೆಗಳು ಹೆಚ್ಚಿವೆ.

Share with Friends
author avatar
Digital Desk