LatestTop Storiesವಿದೇಶ-International

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿ 3 ವರ್ಷ : ಬಿಡುಗಡೆಗೆ ದೇಶವ್ಯಾಪಿ ಪ್ರತಿಭಟನೆ

ಇಸ್ಲಾಮಾಬಾದ್. ಆ.5:: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿದೆ. ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಖಾನ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿರುವ ನಡುವೆಯೇ ಲಾಹೋರ್, ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿರುವ ವರದಿಯಾಗಿದೆ.

73 ವರ್ಷದ ಇಮ್ರಾನ್ ಖಾನ್ ಅವರು 2018ರಿಂದ 2022ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. 2022ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡ ಬಳಿಕ, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವೆಂದು ಅವರು ನಿರಂತರವಾಗಿ ಆರೋಪಿಸುತ್ತಿದ್ದಾರೆ.

2023ರ ಆಗಸ್ಟ್ 5ರಂದು ಭ್ರಷ್ಟಾಚಾರ ಮತ್ತು ರಾಷ್ಟ್ರ ರಹಸ್ಯ ಸೋರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಂಧಿತರಾದ ಇಮ್ರಾನ್ ಖಾನ್ ಪ್ರಸ್ತುತ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಅವರ ಪತ್ನಿ ಬುಶ್ರಾ ಬಿಬಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ಸರ್ಕಾರಿ ಉಡುಗೊರೆಗಳಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ದಂಪತಿಗೆ ಹೆಚ್ಚುವರಿ 17 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ಇಮ್ರಾನ್ ಖಾನ್ ಅವರ ಕುಟುಂಬ, ಪಿಟಿಐ ನಾಯಕರು ಹಾಗೂ ಕೆಲವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಅವರ ಬಂಧನವನ್ನು “ಅನಿಯಮಿತ ಮತ್ತು ರಾಜಕೀಯ ಪ್ರೇರಿತ” ಎಂದು ಟೀಕಿಸಿ, ಅವರ ಸಂವಿಧಾನಬದ್ಧ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿವೆ.

ಪಿಟಿಐ ತನ್ನ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, “ಮೂರು ವರ್ಷಗಳ ಜೈಲು ಜೀವನವೂ ಇಮ್ರಾನ್ ಖಾನ್ ಅವರ ಮನೋಬಲವನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ ಮತ್ತು ಜನರ ಆಯ್ಕೆಯ ಹಕ್ಕಿಗಾಗಿ ಹೋರಾಟ ಮುಂದುವರಿಯುತ್ತದೆ” ಎಂದು ಹೇಳಿದೆ.

Share with Friends
author avatar
News Desk