LatestTop Storiesವಿದೇಶ-International

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಘೋಷಣೆ

ಢಾಕಾ, ಆ.5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸುಮಾರು ಎರಡು ವರ್ಷಗಳ ವನವಾಸದ ಬಳಿಕ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದಾರೆ. ಭಾರತದಲ್ಲಿ ಆಶ್ರಯ ಪಡೆದಿರುವ 78 ವರ್ಷದ ಹಸೀನಾ ಅವರು, ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶ ಹೊಂದಿದ್ದು, ನಿಖರ ದಿನಾಂಕವನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದ ವಿದೇಶಿ ಪತ್ರಕರ್ತರ ಸಂಘ (FCC South Asia) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಹಸೀನಾ, ತಮ್ಮ ಪುತ್ರ ಸಜೀಬ್ ವಾಜೆದ್ ಜಾಯ್ ಹಾಗೂ ಅವಾಮಿ ಲೀಗ್‌ನ ಹಿರಿಯ ನಾಯಕರೊಂದಿಗೆ ಭಾಗವಹಿಸಿದರು.

2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರೀ ಪ್ರತಿಭಟನೆಗಳ ಬಳಿಕ ಅಧಿಕಾರ ಕಳೆದುಕೊಂಡ ಹಸೀನಾ ಭಾರತಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಬಳಿಕ ನಡೆದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಮಾನವತೆಯ ವಿರುದ್ಧದ ಅಪರಾಧ, ಹತ್ಯೆಗೆ ಆದೇಶ ನೀಡಿದ ಆರೋಪ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಮರಣದಂಡನೆ ವಿಧಿಸಲಾಗಿದೆ.

ಈ ನಡುವೆ, ತಮ್ಮ ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಹಸೀನಾ ಆಗ್ರಹಿಸಿದ್ದಾರೆ. ಪ್ರಸ್ತುತ ಸರ್ಕಾರದೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಅವರ ಪುತ್ರ ಸಜೀಬ್ ವಾಜೆದ್ ಜಾಯ್ ತಿಳಿಸಿದ್ದಾರೆ.

ಬಾಂಗ್ಲಾದೇಶ ಸರ್ಕಾರ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಭಾರತ ಸರ್ಕಾರ ಕಾನೂನು ಪ್ರಕ್ರಿಯೆಯಡಿ ಆ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

ಇದೀಗ ಬಾಂಗ್ಲಾದೇಶದ ಹೊಸ ಪ್ರಧಾನಿ ತಾರಿಕ್ ರಹಮಾನ್ ಅಧಿಕಾರಕ್ಕೆ ಬಂದ ಬಳಿಕ ಭಾರತ–ಬಾಂಗ್ಲಾದೇಶ ಸಂಬಂಧಗಳು ಸುಧಾರಿಸುತ್ತಿರುವ ಬೆಳವಣಿಗೆಯ ನಡುವೆಯೇ ಹಸೀನಾ ಅವರ ಈ ಘೋಷಣೆ ರಾಜಕೀಯವಾಗಿ ಮಹತ್ವ ಪಡೆದಿದೆ.

Share with Friends
author avatar
News Desk