ದೆಹಲಿಯಲ್ಲಿ ಹೈಡ್ರಾಮಾ : ಸಂಸತ್ ಬಳಿ ಫೈಟ್, ಬಿಜೆಪಿ ಸಂಸದರಿಗೆ ಗಾಯ, ರಾಹುಲ್ ವಿರುದ್ಧ ಕೇಸ್
ನವದೆಹಲಿ : ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಖಂಡಿಸಿ ಸಂಸತ್ ಬಳಿ ಬಿಜೆಪಿಯೋ ಮತ್ತು ಇಂಡಿಯಾ ಒಕ್ಕೂಟದ ಸಂಸದರು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ಪ್ರತಿಭಟಿಸಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರಿಗೆ ಅನ್ಯಾಯ ಮತ್ತು ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಸಂಸದರ ನಡುವೆ ತಳ್ಳಾಟ ನೂಕಾಟ ನಡೆದು ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ್ತಗಳಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಮಿತ್ ಶಾ ತಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ರಾಜಕೀಯ ಕೂಟದ ಸಂಸದರು ಸಂಸತ್ನ ಮಕರ್ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದರೂ ಕೂಡ ಪ್ರತಿಭಟನೆ ನಡೆಸುತ್ತಾ ಸಂಸತ್ ದ್ವಾರದ ಬಳಿ ಬಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮುಖಾಮುಖಿಯಾಗಿದ್ದಾರೆ.
ತಳ್ಳಾಟ, ನೂಕಾಟದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕೆಳಗೆ ಬಿದ್ದಿದ್ದು, ಅವರ ಹಣೆಗೆ ಗಾಯವಾಗಿ ರಕ್ತ ಸೋರಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ, ರಾಹುಲ್ಗಾಂಧಿ ತಳ್ಳಿದ್ದರಿಂದಾಗಿ ಪ್ರತಾಪ್ ಸಾರಂಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲು :
ಬಿಜೆಪಿ ಸಂಸದರ ಮೇಲೆ ಹಲ್ಲೆ ಕಾರಣ ರಾಹುಲ್ ಗಾಂಧಿ ವಿರುದ್ದ ಕೋಲೆ ಪ್ರಕರಣ ದಾಖಲಿಸಿದ ಬಿಜೆಪಿ, ಮತ್ತೊಂದೆಡೆ ಬಿಜೆಪಿ ಸಂಸದರು ಕಾಂಗ್ರೆಸ್ ಸಂಸದರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ ಕಾಂಗ್ರೆಸ್.
ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ನಡುವೆ ಅಂಬೇಡ್ಕರ್ ವಿಷಯದಲ್ಲಿ ಗದ್ದಲ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಗಾಯವಾದ ನಂತರ ಇಂದು ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಲ್ಲೆ ಮತ್ತು ಪ್ರಚೋದನೆ ಆರೋಪದ ಮೇಲೆ ಬಿಜೆಪಿ ದೂರು ದಾಖಲಿಸಿದೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಹಲ್ಲೆ ಮತ್ತು ಪ್ರಚೋದನೆ ಆರೋಪದ ಮೇಲೆ ಪಕ್ಷವು ಪೊಲೀಸ್ ದೂರು ದಾಖಲಿಸಿದೆ ಎಂದು ಗುರುವಾರ ಹೇಳಿದ್ದಾರೆ. ಸಂಸತ್ ಭವನದ ಮಕರ ದ್ವಾರದ ಹೊರಗೆ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ಘಟನೆಯನ್ನು ಪಕ್ಷದ ಸಂಸದರು ವಿವರಿಸಿದ್ದಾರೆ ಎಂದರು. ಸೆಕ್ಷನ್ 109, 115, 117, 125, 131 ಮತ್ತು 351 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದರು. “ಸೆಕ್ಷನ್ 109 ಕೊಲೆಯ ಯತ್ನ, ಸೆಕ್ಷನ್ 117 ಸ್ವಯಂಪ್ರೇರಿತವಾಗಿ ತೀವ್ರವಾದ ಗಾಯವನ್ನು ಉಂಟುಮಾಡುತ್ತದೆ…” ಎಂದು ಅವರು ಹೇಳಿದರು.
ರಾಹುಲ್ ವಾದವೇನು..?
ಸಂಸತ್ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಸಂಸತ್ತಿನ ಆವರಣದಲ್ಲಿ ಉಂಟಾದ ಘರ್ಷಣೆಯ ಕುರಿತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ನಿರ್ಣಾಯಕ ವಿಷಯಗಳನ್ನು ಎತ್ತುವ ವಿರೋಧ ಪಕ್ಷದ ಪ್ರಯತ್ನಗಳಿಗೆ ಆಡಳಿತ ಪಕ್ಷದ ಸಂಸದರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಂಬೇಡ್ಕರ್ ವಿವಾದದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಇಂತಹ ತಂತ್ರಗಳನ್ನು ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂದು ಸಂಸತ್ ಆವರಣದಲ್ಲಿ ಭಾರೀ ಕೋಲಾಹಲ ಏರ್ಪಟ್ಟಿತು. ಸಂಸತ್ತಿನ ಪ್ರವೇಶದ ಮೆಟ್ಟಿಲುಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮಹಿಳಾ ಸಂಸದೆಯ ಮೇಲೆ ಬಲಪ್ರಯೋಗ ಮಾಡಿದ್ದಾರೆ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಮತ್ತು ಕಿರಣ್ ರಿಜಿಜು ಆರೋಪಿಸಿದ ನಂತರ ಗದ್ದಲದ ನಡುವೆ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಯಿತು.
ನನ್ನ ಘನತೆಗೆ ಧಕ್ಕೆಯಾಗಿದೆ ಎಂದ ನಾಗಾಲ್ಯಾಂಡ್ನ ಬಿಜೆಪಿ ಸಂಸದೆ ಆರೋಪ :
ರಾಹುಲ್ ಗಾಂಧಿ ತನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದು, ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ಮಹಿಳಾ ಸಂಸದೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಸಭಾ ಅಧ್ಯಕ್ಷರಿಗೆ ದೂರನ್ನೂ ನೀಡಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ತನ್ನೊಂದಿಗೆ ಅನುಚಿತ ವರ್ತನೆ ಮಾಡಿದ್ದಾರೆ ಎಂದು ನಾಗಾಲ್ಯಾಂಡ್ನ ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಇಬ್ಬರು ಬಿಜೆಪಿಯ ಸಂಸದರಿಗೆ ಗಾಯಗಳನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿದ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಈ ಆರೋಪ ಕೇಳಿಬಂದಿದೆ.
