LatestTop Storiesರಾಜ್ಯ-Karnataka

ಮತ್ತೆ ವಕ್ಕರಿಸಿದ ಕೋವಿಡ್ ಭೂತ : ಆಂಧ್ರದಲ್ಲಿ ನಾಲ್ವರ ಸಾವು, ಕರ್ನಾಟಕದಲ್ಲೂ ಆತಂಕ

ಅಮರಾವತಿ, ಜು. 17: ಆಂಧ್ರ ಪ್ರದೇಶದಲ್ಲಿ ಕಳೆದ ಮೂರು ವಾರಗಳ ಅವಧಿಯಲ್ಲಿ (ಜೂನ್ 26 ರಿಂದ ಜುಲೈ 16ರವರೆಗೆ) ಒಟ್ಟು 12 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಮೃತಪಟ್ಟ ಎಲ್ಲರೂ ಈಗಾಗಲೇ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಸೇರಿದಂತೆ ಇತರೆ ಗಂಭೀರ ಸಹ-ರೋಗಗಳಿಂದ ಬಳಲುತ್ತಿದ್ದರು.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಜಿ. ವೀರಪಾಂಡಿಯನ್ ಅವರು ಜುಲೈ 16ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮೃತಪಟ್ಟವರಲ್ಲಿ ಮೂರು ಮಂದಿ ಕಡುಪಾ ಜಿಲ್ಲೆ ಹಾಗೂ ಒಬ್ಬರು ಕಾಕಿನಾಡ ಜಿಲ್ಲೆಗೆ ಸೇರಿದವರು ಎಂದು ತಿಳಿಸಿದ್ದಾರೆ.

ಉಳಿದ ಎಂಟು ಸೋಂಕಿತರಲ್ಲಿ ಮೂರು ಮಂದಿ ಗೃಹ ಪ್ರತ್ಯೇಕ ಚಿಕಿತ್ಸೆಯಲ್ಲಿ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೂ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ ಆಯುಕ್ತರು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿಯನ್ನು ಅಗತ್ಯ ಮುನ್ನೆಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದೂ ಹೇಳಿದ್ದಾರೆ.

ಪ್ರಕರಣಗಳು ಕಡುಪಾ (8), ಗುಂಟೂರು (2), ವಿಶಾಖಪಟ್ಟಣಂ (1) ಮತ್ತು ಕಾಕಿನಾಡ (1) ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಸೋಂಕಿತರು ವಿವಿಧ ಮಂಡಲಗಳು ಹಾಗೂ ಪ್ರದೇಶಗಳಿಗೆ ಸೇರಿದವರಾಗಿದ್ದು, ಯಾವುದೇ ಒಂದೇ ಪ್ರದೇಶದಲ್ಲಿ ಸೋಂಕಿನ ಗುಚ್ಛ (ಕ್ಲಸ್ಟರ್) ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಗಡಿಯಲ್ಲೂ ತಪಾಸಣೆ :
ಅತ್ತ ಆಂಧ್ರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ರಾಜ್ಯದ ಗಡಿಭಾಗದಲ್ಲೂ ಕೊರೋನಾ ಭೀತಿ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕೋವಿಡ್​ ವೈರಸ್ ರಾಜ್ಯಕ್ಕೆ ಹರಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಗಡಿಯಲ್ಲಿ ನಿಗಾ ವಹಿಸಲಾಗಿದೆ. ಪಾವಗಡ ಮತ್ತು ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಅಗತ್ಯ ಚಿಕಿತ್ಸಾ ಕೇಂದ್ರಗಳನ್ನ ಈಗಾಗಲೇ ತೆರೆಯಲಾಗಿದೆ.

ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ
ದಿನದಿಂದ ದಿನಕ್ಕೆ ಆಂಧ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದ ಇಲಾಖೆಯ ಮಾಹಿತಿ ಪ್ರಕಾರ ಇಂದು ನಾಲ್ವರು ಕೊರೋನಾಗೆ ಮೃತಪಟ್ಟಿದ್ದಾರೆ. ಕಡಬದಲ್ಲೇ‌ ಮೂವರು ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಸೋಂಕಿತರನ್ನು ಐಸೋಲೇಟ್‌ ಮಾಡಲು ಡಿಸಿಎಂ ಸೂಚನೆ :
ಆಂಧ್ರದಲ್ಲಿ ಕೊವಿಡ್ ಸೋಂಕಿನಿಂದ ನಾಲ್ವರು ಸಾವು ವಿಚಾರವಾಗಿ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ‘‘ನೆರೆಯ ಅನಂತಪುರದಲ್ಲೂ ಕೊವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಡೆಂಘೀ, ಚಿಕುನ್ ಗುನ್ಯಾ ವರದಿಯಾಗಿದೆ. ಅನಂತಪುರದಿಂದ ಜಿಲ್ಲೆಗೆ ಬರಬಾರದೆಂದು ಚೆಕ್‌ಪೋಸ್ಟ್‌ ಹಾಕಲಾಗಿದೆ. ಆ ರೀತಿ ಯಾರಾದರೂ ಬಂದರೆ ಐಸೋಲೇಟ್‌ ಮಾಡಲು ಸೂಚಿಸಿದ್ದೇನೆ. ಎಂದಿದ್ದಾರೆ.

Share with Friends
author avatar
News Desk