Latestವಿಜಯಪುರ-Vijayapura

ಆಲಮಟ್ಟಿ ಡ್ಯಾಂನಿಂದ 1.11 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಕೃಷ್ಣಾ ನದಿ ಅಪಾಯಮಟ್ಟ ಮೀರಿ ಹರಿವು..!

ವಿಜಯಪುರ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ.

ಜಲಾಶಯದಿಂದ ಕೃಷ್ಣಾ ನದಿಗೆ 1,11,064 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಡ್ಯಾಂಗೆ ಪ್ರಸ್ತುತ 95,625 ಕ್ಯೂಸೆಕ್ ನೀರು ಒಳಹರಿವು ಆಗುತ್ತಿದೆ.

123 TMC ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ 117 TMC ನೀರು ಸಂಗ್ರಹವಾಗಿದೆ. ಒಳಹರಿವು ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಬಿಡಲಾಗುತ್ತಿದೆ.

ಆಲಮಟ್ಟಿ ಡ್ಯಾಂನಿಂದ 111 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ಅಪಾಯಮಟ್ಟ ಮೀರಿ ಉಕ್ಕಿಹರಿಯುತ್ತಿರುವ ಕೃಷ್ಣಾ ನದಿ ಒಡಲು ಭರ್ತಿಯಾಗಿದೆ. ಮೈದುಂಬಿ ಉಕ್ಕಿಹರಿಯುತ್ತಿರುವ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ನದಿ ತೀರದ ಜನರು ಮತ್ತು ರೈತರು ನದಿಗೆ ಇಳಿಯದಂತೆ, ದಾಟದಂತೆ ಹಾಗೂ ನದಿ ದಂಡೆಯಲ್ಲಿ ಜಾನುವಾರುಗಳನ್ನು ಮೇಯಿಸದಂತೆ ಸೂಚಿಸಲಾಗಿದೆ. ತಗ್ಗು ಪ್ರದೇಶದ ಗ್ರಾಮಗಳ ಜನರು ಜಾಗರೂಕರಾಗಿರಬೇಕು ಎಂದು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ಕ್ಷಣಕ್ಷಣಕ್ಕೂ ನಿಗಾ ವಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ 48 ಗಂಟೆ ಮಳೆ ಮುಂದುವರೆಯುವ ಮುನ್ಸೂಚನೆ ಇರುವುದರಿಂದ ಆಲಮಟ್ಟಿ ಡ್ಯಾಂನಿಂದ ನೀರಿನ ಬಿಡುಗಡೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Share with Friends
author avatar
Digital Desk