Latestರಾಯಚೂರು

ಊಟ ಸೇವಿಸಿ ಸಿಂಧನೂರು ವಸತಿ ಶಾಲೆಯ 21 ಮಕ್ಕಳು ಅಸ್ವಸ್ಥ..!

ರಾಯಚೂರು: ಸಿಂಧನೂರಿನ ವಸತಿ ಶಾಲೆಯಲ್ಲಿ ಊಟ ಸೇವಿಸಿದ 21 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.ಸಿಂಧನೂರು ತಾಲೂಕಿನ ವಳ ಬಳ್ಳಾರಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಮುಂಜಾನೆ ಪಲಾವ್ ಮತ್ತು ಉಪಹಾರ ಸೇವಿಸಿದ್ದ ಮಕ್ಕಳಿಗೆ ಸ್ವಲ್ಪ ಸಮಯದಲ್ಲೇ ತಲೆನೋವು ಹಾಗೂ ಮೂರ್ಚೆಯಂತಹ ಅನುಭವ ಕಂಡುಬಂದಿದೆ. ಊಟದಲ್ಲಿ ಹುಳುಗಳು ಕಂಡುಬಂದಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.ಮೊದಲು 2-3 ಮಕ್ಕಳಿಗೆ ಸಮಸ್ಯೆ ಕಂಡುಬಂದಿದ್ದು, ನಂತರ ಒಟ್ಟು 20-21 ಮಕ್ಕಳಲ್ಲಿ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡವು.

ಊಟ ಸೇವಿಸಿ ಸಿಂಧನೂರು ವಸತಿ ಶಾಲೆಯ 21 ಮಕ್ಕಳು ಅಸ್ವಸ್ಥ

ವಿಷಯ ತಿಳಿದ ತಕ್ಷಣ ವಾರ್ಡನ್ ಮತ್ತು ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನು ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ವಸತಿ ನಿಲಯದಲ್ಲಿ ಒಟ್ಟು 540 ಮಕ್ಕಳು ವಾಸಿಸುತ್ತಿದ್ದಾರೆ.

ಆಹಾರದಲ್ಲಿ ಗುಣಮಟ್ಟ ಕಾಪಾಡದೇ ಇರುವುದೇ ಇದಕ್ಕೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಖಂಡರು ಈ ನಿರ್ಲಕ್ಷ್ಯಕ್ಕೆ ಕಾರಣರಾದ ವಾರ್ಡನ್ ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

“ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಜವಾಬ್ದಾರಿ ಇರುವವರು ಶಿಕ್ಷೆ ಅನುಭವಿಸಲೇಬೇಕು” ಎಂದು ಪೋಷಕರು ಕಿಡಿಕಾರಿದರು.

ಘಟನೆ ಕುರಿತು ಮಾಹಿತಿ ಪಡೆದ ಶಿಕ್ಷಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Share with Friends
author avatar
Digital Desk