LatestTop Storiesಬೆಂಗಳೂರು-Bengaluru

ಸಾರಿಗೆ ನೌಕರರ 2,500 ಕೋಟಿ ಪಿಎಫ್ ಹಣ ಬಾಕಿ ಆರೋಪ

ಬೆಂಗಳೂರು.ಅ.14- ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಹಣದ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕೆಎಸ್‌ಆರ್‌ಟಿಸಿ,ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಗಮಗಳ ನೌಕರರಿಗೆ ಸಂಬಂಧಿಸಿದ ಸುಮಾರು 2,500 ಕೋಟಿ ಪಿಎಫ್ ಹಣದ ಪಾವತಿ ಬಾಕಿ ಇದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾರಿಗೆ ನೌಕರರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ನೌಕರರ ಮಾಸಿಕ ವೇತನದಲ್ಲಿ ಪಿಎಫ್ ಕಡಿತಗೊಳಿಸಲಾಗುತ್ತಿದ್ದರೂ, ಆ ಮೊತ್ತವನ್ನು ಪಿಎಫ್ ಟ್ರಸ್ಟ್ಗೆ ನಿಯಮಿತವಾಗಿ ಪಾವತಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಳೆದ ಎರಡು ತಿಂಗಳಿಂದ ಹಲವು ನೌಕರರಿಗೆ ಪಿಎಫ್ ಕ್ಲೈಮ್ ಮೊತ್ತ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಪಿಎಫ್ ಹಣದಿಂದ ನಿಗಮಗಳ ಖರ್ಚು ನಿರ್ವಹಣೆ?:

ನೌಕರರ ವೇತನದಿಂದ ಕಡಿತಗೊಳಿಸುವ ಪಿಎಫ್ ಮೊತ್ತವನ್ನು ನಿಗದಿತ ನಿಯಮಗಳ ಪ್ರಕಾರ ಸಂಬಂಧಿತ ಪಿಎಫ್ ಖಾತೆ ಅಥವಾ ಟ್ರಸ್ಟ್ಗೆ ಜಮೆ ಮಾಡಬೇಕಾಗುತ್ತದೆ. ಆದರೆ ಈ ಹಣವನ್ನು ನಿಗಮಗಳ ದೈನಂದಿನ ವೆಚ್ಚ, ವಿಶೇಷವಾಗಿ ಡೀಸೆಲ್ ಖರೀದಿಗೆ ಬಳಸಲಾಗಿದೆ ಎಂಬ ಆರೋಪ ಚರ್ಚೆಗೆ ಕಾರಣವಾಗಿದೆ.

ನೌಕರರ ಭವಿಷ್ಯಕ್ಕಾಗಿ ಮೀಸಲಿಡಬೇಕಾದ ಹಣವನ್ನು ನಿಗಮಗಳ ಕಾರ್ಯಾಚರಣೆಗೆ ಬಳಸಲಾಗಿದೆಯೇ? ಅಥವಾ ಪಿಎಫ್ ಪಾವತಿಯಲ್ಲಿ ಬೇರೆ ರೀತಿಯ ಹಣಕಾಸಿನ ಸಮಸ್ಯೆ ಉಂಟಾಗಿದೆಯೇ? ಎಂಬುದಕ್ಕೆ ಅಧಿಕೃತ ದಾಖಲೆಗಳ ಮೂಲಕ ಸ್ಪಷ್ಟನೆ ದೊರೆಯಬೇಕಿದೆ.

ಸಾವಿರಾರು ನೌಕರರಿಗೆ ಆತಂಕ:

ನಾಲ್ಕು ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ನೌಕರರು ತಮ್ಮ ಪಿಎಫ್ ಹಣದ ಸ್ಥಿತಿಗತಿ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದರೂ ಹಣ ಸಿಗುತ್ತಿಲ್ಲ ಎಂಬ ಆರೋಪಗಳು ನೌಕರರ ವಲಯದಲ್ಲಿ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಪಿಎಫ್ ಹಣದ ಸಂಪೂರ್ಣ ಲೆಕ್ಕಪತ್ರವನ್ನು ಬಹಿರಂಗಪಡಿಸಬೇಕು, ಬಾಕಿ ಮೊತ್ತದ ಕುರಿತು ಸ್ಪಷ್ಟನೆ ನೀಡಬೇಕು ಹಾಗೂ ಅರ್ಹ ನೌಕರರ ಕ್ಲೈಮ್‌ಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸರ್ಕಾರದ ಸ್ಪಷ್ಟನೆಗೆ ಒತ್ತಾಯ:

ಪಿಎಫ್ ಹಣದ ವಿಚಾರವಾಗಿ ಸಾರಿಗೆ ನೌಕರರ ಮುಖಂಡರು ಸರ್ಕಾರದ ಗಮನ ಸೆಳೆದಿದ್ದಾರೆ,ಆರೋಪಗಳ ಕುರಿತು ಸಂಬಂಧಿತ ನಿಗಮಗಳ ಆಡಳಿತ ಮಂಡಳಿ ಮತ್ತು ಸರ್ಕಾರ ಅಧಿಕೃತ ಸ್ಪಷ್ಟನೆ ನೀಡಬೇಕಿದೆ.

2,500 ಕೋಟಿ ಮೊತ್ತದ ನೈಜ ಸ್ಥಿತಿ ಏನು? ಪಿಎಫ್ ಹಣ ಪಾವತಿಯಲ್ಲಿ ವಿಳಂಬವಾಗಲು ಕಾರಣವೇನು? ನೌಕರರ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಅಧಿಕೃತ ಲೆಕ್ಕಪತ್ರ ಮತ್ತು ತನಿಖೆಯ ಮೂಲಕ ಉತ್ತರ ಸಿಗಬೇಕಿದೆ.

Share with Friends
author avatar
Digital Desk