LatestTop Storiesರಾಜ್ಯ-Karnataka

ಕೆಐಎಡಿಬಿಯಲ್ಲಿ ಸಾವಿರಾರು ಎಕರೆ ಭೂಮಿ ಇದ್ದರೂ, ರೈತರ ಜಮೀನಿನ ಮೇಲೆ ಕಣ್ಣು ಹಾಕಿದ್ದೇಕೆ..?

ಕಲಬುರಗಿ,ಜು.13: ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೌನ್‌ಶಿಪ್ ಮಾಡಲು ಕೆಐಎಡಿಬಿಯಿಂದ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿದ್ದೀರಿ ಅಲ್ವಾ? ಹಾಗಾದರೆ ರೈತರ ಫಲವತ್ತಾದ ಜಮೀನು ಯಾಕೆ ಬೇಕು? ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಡದಿಯಲ್ಲಿ ರೈತರಿಂದ ಭಾರೀ ಪ್ರತಿಭಟನೆ

ಕಲಬುರಗಿಯಲ್ಲಿ ಮಾತನಾಡಿದ ಅವರು,ಕೆಐಎಡಿಬಿಯಲ್ಲಿ ಈಗಾಗಲೇ ಸುಮಾರು ಒಂದೂವರೆ ಲಕ್ಷ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಹಾಗಿದ್ದರೂ ಫಲವತ್ತಾದ ಭೂಮಿಯ ಮೇಲೆಯೇ ಯಾಕೆ ಕಣ್ಣು? ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದಲ್ಲಿಯೇ ಸ್ಮಾರ್ಟ್, ಎಐ ಸಿಟಿ ಮಾಡಿದರೆ ಇಲ್ಲಿನ ಜನ ಬೇಡ ಎಂದಿದ್ದರಾ? ಅಲ್ಲಿ ಮಾಡಿದರೆ ಸಾವಿರಾರು ಜನರಿಗೆ ಕೆಲಸ ಸಿಗುತ್ತಿತ್ತು. ವಶಪಡಿಸಿಕೊಂಡಿರುವ ಲಕ್ಷಾಂತರ ಎಕರೆ ಭೂಮಿ ಬಿಟ್ಟು ಫಲವತ್ತಾದ ಭೂಮಿಯನ್ನೇ ವಶಪಡಿಸಿಕೊಳ್ಳುವ ಉದ್ದೇಶವೇನು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಅವರ ಎದೆಯ ಮೇಲೆ ಮರಣ ಶಾಸನ ಬರೆಯುತ್ತಿದೆ ಎಂದು ಕಿಡಿಕಾರಿದರು. ಪ್ರತಿಷ್ಠೆಯನ್ನು ಬಿಟ್ಟು ರೈತರ ನಿಜವಾದ ಸಂಕಷ್ಟವನ್ನು ಕೇಳುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಕಡಿಮೆ ಜಮೀನು ಹೊಂದಿರುವ ರೈತರು ಅಲ್ಲಿ ಹೈನುಗಾರಿಕೆ, ತೋಟಗಾರಿಕೆ ಮಾಡಿ ಬದುಕುತ್ತಿದ್ದಾರೆ. ಆದರೆ ಲಕ್ಷಾಂತರ ಗಿಡ ಮರಗಳನ್ನು ಕಡಿದು ಸರ್ಕಾರ ಪರಿಸರ ಹಾನಿ ಮಾಡುತ್ತಿದೆ. ಇದು ಅಭಿವೃದ್ಧಿಯಲ್ಲ, ಇದು ವಿನಾಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬಿಡದಿ ಭಾಗದಲ್ಲಿ ಪಕ್ಷದ ವತಿಯಿಂದ ಪಾದಯಾತ್ರೆ ಮಾಡಲಾಗಿದೆ. ಬಿಡದಿ ಟೌನ್‌ಶಿಪ್‌ಗೆ ರೈತರ ಒಪ್ಪಿಗೆ ಇದ್ದರೆ ಮುಂದುವರಿಸಲಿ. ಆದರೆ ರೈತರ ವಿರೋಧವಿದ್ದರೆ ಇದನ್ನು ಕೂಡಲೇ ಬಿಟ್ಟುಬಿಡಿ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ರೈತರ ಒಪ್ಪಿಗೆ ಇಲ್ಲದೇ, ಯಾವುದೇ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕೂಡಲೇ ಸರ್ಕಾರವು ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು. ರೈತ ವಿರೋಧಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಅನ್ನದಾತರ ಹಕ್ಕು ಮತ್ತು ಬದುಕಿನ ರಕ್ಷಣೆಗೆ ನಾವು ಸದಾ ರೈತರೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.

Share with Friends
author avatar
Digital Desk