
ದಾಖಲೆ ಬರೆದ ರಾಕಿಂಗ್ ಸ್ಟಾರ್ : ಭಾರತದ ಅತ್ಯಂತ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಫಸ್ಟ್ !
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ಚಿತ್ರದ ವಿರುದ್ಧ ಎಷ್ಟೇ ನೆಗೆಟಿವ್ ಸುದ್ದಿಗಳು ಹರಿದಾಡುತ್ತಿದ್ದರೂ, ಯಾವುದೂ ಚಿತ್ರದ ಕ್ರೇಜ್‌ಗೆ ಧಕ್ಕೆ ತರಲು ಸಾಧ್ಯವಾಗಿಲ್ಲ. ಸಿನಿಮಾ ರಿಲೀಸ್ ವಿಳಂಬವಾದರೂ ಚಿತ್ರದ ಮೇಲಿರುವ ನಿರೀಕ್ಷೆ ಒಂದು ಚೂರು ಕಮ್ಮಿಯಾಗಿಲ್ಲ ಎಂಬುದಕ್ಕೆ ಐಎಂಡಿಬಿ ಬಿಡುಗಡೆ ಮಾಡಿರುವ ಹೊಸ ಪಟ್ಟಿಯೇ ಸಾಕ್ಷಿಯಾಗಿದೆ.
ಐಎಂಡಿಬಿ ಬಿಡುಗಡೆ ಮಾಡಿರುವ ಭಾರತದ ಅತ್ಯಂತ ನಿರೀಕ್ಷಿತ ಹೊಸ ಚಿತ್ರಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಸಿನಿಮಾ ಬರೋಬ್ಬರಿ ಶೇಕಡಾ 47 ರಷ್ಟು ಮತಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಮೂಲಕ ಯಶ್ ಅವರ ಜಾಗತಿಕ ಜನಪ್ರಿಯತೆ ಮತ್ತು ಬಾಕ್ಸ್ ಆಫೀಸ್ ಮೇಲಿರುವ ಅವರ ಹಿಡಿತ ಎಂತಹುದ್ದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿರೋಧಿಗಳ ನೆಗೆಟಿವ್ ಪ್ರಚಾರಕ್ಕೆ ತಲೆಕೆಡಿಸಿಕೊಳ್ಳದ ರಾಕಿ ಭಾಯ್ ಅಭಿಮಾನಿಗಳು, ಈ ಮೂಲಕ ಚಿತ್ರದ ಮೇಲಿರುವ ತಮ್ಮ ಕ್ರೇಜ್ ಹಾಗೂ ಪ್ರೀತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಚಿತ್ರದ ರಿಲೀಸ್ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ‘ಟಾಕ್ಸಿಕ್’ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದ ಸದ್ದು ಮಾಡುತ್ತಿರುವುದು, ಜಾಗತಿಕ ಚಿತ್ರರಂಗದ ಮಾರುಕಟ್ಟೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗಿರುವ ದೈತ್ಯ ತಾಕತ್ತು ಮತ್ತು ಜನಪ್ರಿಯತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಿನಿಮಾ ಘೋಷಣೆಯಾದ ದಿನದಿಂದ ಹಿಡಿದು ಇಂದಿನವರೆಗೂ ಚಿತ್ರದ ಸುತ್ತ ಹತ್ತಾರು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ವಿರೋಧಿಗಳು ಹಾಗೂ ಕೆಲವು ಸಾಮಾಜಿಕ ಜಾಲತಾಣಗಳ ವೇದಿಕೆಗಳು ಹಬ್ಬಿಸುತ್ತಿರುವ ಯಾವುದೇ ನೆಗೆಟಿವ್ ಕಮೆಂಟ್‌ಗಳು, ಟ್ರೋಲ್‌ಗಳು ಅಥವಾ ಸುಳ್ಳು ಸುದ್ದಿಗಳು ಚಿತ್ರದ ಪ್ರಚಾರಕ್ಕಾಗಲಿ ಅಥವಾ ಸಿನಿಮಾದ ಮೇಲಿರುವ ಹೈಪ್‌ಗಾಗಲಿ ಯಾವುದೇ ರೀತಿಯ ನಕರಾತ್ಮಕ ಪ್ರಭಾವ ಬೀರಲು ಸಾಧ್ಯವಾಗಿಲ್ಲ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಮೂಲಕ ರಾಕಿ ಭಾಯ್ ಯಶ್, ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಮತ್ತೊಂದು ಅಭೂತಪೂರ್ವ ಬಿರುಗಾಳಿ ಎಬ್ಬಿಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಜಾಗತಿಕ ಮಟ್ಟದ ತಾಂತ್ರಿಕ ಶ್ರೀಮಂತಿಕೆ ಹಾಗೂ ಯಶ್ ಅವರ ರಗಡ್ ಲುಕ್‌ನಿಂದಾಗಿ ‘ಟಾಕ್ಸಿಕ್’ ಸಿನಿಮಾ ಸದ್ಯದಲ್ಲೇ ಬಾಕ್ಸ್ ಆಫೀಸ್‌ನ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುವುದು ಗ್ಯಾರಂಟಿ ಎಂಬ ಮಾತುಗಳು ಗಾಂಧಿನಗರದಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ಕೇಳಿಬರುತ್ತಿವೆ.
