
ಗೌರಿ-ಗಣೇಶ ಸಂಭ್ರಮ ಮುಗಿಲು ಮುಟ್ಟಿತು!
ತುಮಕೂರು : ಕಲ್ಪತರು ನಾಡು ತಿಪಟೂರಿನಲ್ಲಿ ಗೌರಿ-ಗಣೇಶ ಹಬ್ಬ ಹಾಗೂ ನಾಗರ ಪಂಚಮಿಯ ಸಂಭ್ರಮ ಮುಗಿಲು ಮುಟ್ಟಿದೆ.ಸಾಂಪ್ರದಾಯಿಕ ಆಚರಣೆ, ಮಾರುಕಟ್ಟೆಯ ಗಿಜಿಗುಡುವ ರಂಗು ಮತ್ತು ಭಕ್ತರ ಶ್ರದ್ಧಾ-ಭಕ್ತಿಯ ಸಮಾಗಮ ನಗರದಲ್ಲಿ ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿದೆ. ತಿಪಟೂರಿನ ಪ್ರಮುಖ ಮಾರುಕಟ್ಟೆಗಳಾದ ಬಿ.ಹೆಚ್. ರಸ್ತೆ, ನಗರಸಭೆ ವೃತ್ತ ಹಾಗೂ ಎಪಿಎಂಸಿ ವೃತ್ತಗಳಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ.
ಬಾಳೆ ಕಂದು, ಮಾವಿನ ಸೊಪ್ಪು, ವಿವಿಧ ಬಗೆಯ ಹೂವುಗಳು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನಸಾಗರವೇ ಹರಿದುಬಂದಿದೆ.ಪರಿಸರ ಜಾಗೃತಿಯ ಸಂಕೇತವಾಗಿ ಈ ಬಾರಿ ನಗರದಲ್ಲಿ ಜೇಡಿಮಣ್ಣಿನ ಗೌರಿ ಮತ್ತು ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
ಹಬ್ಬದ ಆರಂಭಿಕ ಅಂಗವಾಗಿ ನಾಗರ ಪೂಜೆಯನ್ನು ಸಡಗರದಿಂದ ನೆರೆವೆಸುತ್ತಿರುವ ಭಕ್ತರು ಮಹಿಳೆಯರು ಬೆಳಿಗ್ಗೆಯೇ ಶುಚಿರ್ಭೂತರಾಗಿ ನಗರದ ಪ್ರಸಿದ್ಧ ದೇವಾಲಯಗಳ ಆವರಣದಲ್ಲಿರುವ ನಾಗರಕಲ್ಲುಗಳಿಗೆ ಹಾಲೆರೆದಿದ್ದಾರೆ.

ವಿಶೇಷವಾಗಿ ನಾಗರಕಲ್ಲುಗಳಿಗೆ ಭಕ್ತರು ಅರಿಶಿನ-ಕುಂಕುಮ, ಹೂ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿದರು.ಕುಟುಂಬದ ಸುಖ-ಶಾಂತಿ, ಸಂತಾನ ಪ್ರಾಪ್ತಿ ಹಾಗೂ ಕೃಷಿ ಸಮೃದ್ಧಿಗಾಗಿ ತಂಬಿಟ್ಟು, ನೆನೆಸಿದ ಕಡಲೆಕಾಳು ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ.
ಮನೆಗಳಲ್ಲಿ ತಾಯಿ ಗೌರಿಯನ್ನು ಸಡಗರದಿಂದ ಸ್ವಾಗತಿಸಿ, ಬಾಗಿನ ಅರ್ಪಿಸುವ ಸಂಭ್ರಮ ಒಂದೆಡೆಯಾದರೆ, ವಿಘ್ನನಿವಾರಕ ಗಣೇಶನನ್ನು ಕೂರಿಸಿ ಮೋದಕ, ಕಡುಬುಗಳ ನೈವೇದ್ಯ ಅರ್ಪಿಸುವ ಭಕ್ತಿ ಇನ್ನೊಂದೆಡೆ.
ನಗರದ ವಿವಿಧ ಬಡಾವಣೆಗಳ ಯುವಕ ಮಂಡಳಿಗಳು ಆಕರ್ಷಕ ಪೆಂಡಾಲ್‌ಗಳನ್ನು ನಿರ್ಮಿಸಿ ಬೃಹತ್ ಗಣಪತಿ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿವೆ.
ತೆಂಗಿನ ನಾಡು ತಿಪಟೂರಿನ ಜನತೆಗೆ ಗೌರಿ-ಗಣೇಶ ಮತ್ತು ನಾಗರ ಪೂಜೆ ಕೇವಲ ಹಬ್ಬವಲ್ಲ, ಸಾಂಸ್ಕೃತಿಕ ಸಡಗರ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹೊಸ ಬಟ್ಟೆ ತೊಟ್ಟು, ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತಿಪಟೂರು ನಗರದಾದ್ಯಂತ ಬಾರದಂತೆ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ನಗರದಾದ್ಯಂತ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ.
