LatestTop Storiesಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರಿನಲ್ಲಿ ಎಸ್‌ಐಆರ್ ದುರುಪಯೋಗ ಆರೋಪ : ಮತ್ತೊಂದು ಎಫ್‌ಐಆರ್ ದಾಖಲು

ಬೆಂಗಳೂರು.ಅ.9- ಎಸ್‌ಐಆರ್ ಪ್ರಕ್ರಿಯೆ ದುರುಪಯೋಗಪಡಿಸಿಕೊಂಡ ಆರೋಪದಡಿ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗರ್ ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 45ರಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬ ಆರೋಪ ಕೇಳಿಬಂದಿದೆ.ಬಿಎಲ್‌ಎ-2 ದೀಪಕ್ ಸಿಂಗ್ ನಮೂನೆ-7ರಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮತದಾರರು ಸ್ಥಳದಲ್ಲೇ ವಾಸವಾಗಿದ್ದರೂ ಅವರು ಗೈರು ಎಂದು ನಮೂನೆ-7ರಲ್ಲಿ ದಾಖಲಿಸಿ ಅರ್ಜಿ ಸಲ್ಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಸುಬೇದಾರ್ ಪಾಳ್ಯ ವ್ಯಾಪ್ತಿಯಲ್ಲಿ 136 ಮತದಾರರು ಗೈರು ಎಂದು ದಾಖಲಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಬಿಎಲ್‌ಎ-2 ಸಲ್ಲಿಸಿರುವ ವಿವಿಧ ಫಾರಂಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ.ಹಲವಾರು ನಮೂನೆಗಳನ್ನು ಹೋಲಿಕೆ ಮಾಡಿದಾಗ ದಾಖಲಾತಿಗಳಲ್ಲಿ ವ್ಯತ್ಯಾಸ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಒಳಸಂಚು ನಡೆಸಲಾಗಿದೆ ಎಂಬ ಆರೋಪದ ಮೇಲೂ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಖಲೆಗಳು ಮತ್ತು ಸಲ್ಲಿಕೆಯಾಗಿರುವ ವಿವಿಧ ಫಾರಂಗಳ ಪರಿಶೀಲನೆ ಸೇರಿದಂತೆ ತನಿಖೆ ಮುಂದುವರಿಸಿದ್ದಾರೆ.

Share with Friends
author avatar
Digital Desk