LatestTop Storiesಬೆಂಗಳೂರು-Bengaluru

ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು.ಅ.9- ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ.

ನಿನ್ನೆ ತಡರಾತ್ರಿ ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ ಹಾಗೂ ವಿವೇಕನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಕೆಆರ್ ಪುರಂ ಮತ್ತು ಟಿನ್ ಫ್ಯಾಕ್ಟರಿ ಸುತ್ತಮುತ್ತ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ನಿಧಾನಗೊಂಡಿತ್ತು. ಜಲಾವೃತ ಪ್ರದೇಶಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವAತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಗೊರಗುಂಟೆಪಾಳ್ಯದಲ್ಲಿ ಲಾರಿ ಮೇಲೆ ಬಿದ್ದ ಬೃಹತ್ ಮರ:

ಬೆಳಗಿನ ಜಾವ 5.30ರ ಸುಮಾರಿಗೆ ಗೊರಗುಂಟೆಪಾಳ್ಯ ಮುಖ್ಯರಸ್ತೆಯ ಸಿಗ್ನಲ್ ಬಳಿ ಬೃಹತ್ ಮರವೊಂದು ಲಾರಿ ಮೇಲೆ ಬಿದ್ದಿದೆ. ಘಟನೆಯ ವೇಳೆ ಸಿಗ್ನಲ್‌ನಲ್ಲಿ ಎರಡು ಕಾರುಗಳು ಮತ್ತು ಒಂದು ಲಾರಿ ನಿಂತಿದ್ದವು. ಮರ ಲಾರಿ ಮೇಲೆ ಬಿದ್ದ ಪರಿಣಾಮ ಚಾಲಕ ಅಪಾಯದಿಂದ ಪಾರಾಗಿದ್ದು, ಎರಡು ಕಾರುಗಳಿಗೂ ಯಾವುದೇ ಅನಾಹುತ ಸಂಭವಿಸಿಲ್ಲ.

ಮರ ಬಿದ್ದ ಹಿನ್ನೆಲೆಯಲ್ಲಿ ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಕಡೆಗಿನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸುಮ್ಮನಹಳ್ಳಿಯಿಂದ ತುಮಕೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲೂ ಸಂಚಾರ ನಿರ್ಬಂಧಿಸಲಾಗಿದೆ.ಸ್ಥಳಕ್ಕೆ ಜಿಬಿಎ ಹಾಗೂ ಟ್ರಾಫಿಕ್ ಸಿಬ್ಬಂದಿ ಭೇಟಿ ನೀಡಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Share with Friends
author avatar
Digital Desk