
ನೋಟೀಸ್ ಇಲ್ಲದೆ ಅಂಗಡಿ ತೆರವು: ಕೈ ಮುಗಿದು ಬೇಡಿಕೊಂಡರೂ ಕೇಳದ ಜಿಬಿಎ ಅಧಿಕಾರಿಗಳು..!
ಬೆಂಗಳೂರು: ಗಾಂಧಿ ಬಜಾರ್ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಜಿಬಿಎ ಅಧಿಕಾರಿಗಳು ಹಠಾತ್ ತೆರವು ಕಾರ್ಯಾಚರಣೆ ನಡೆಸಿದ್ದು, ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಂಗಡಿ ಮಾಲೀಕರಿಗೆ ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಏಕಾಏಕಿ ತೆರವು ಕಾರ್ಯ ಆರಂಭಿಸಿದ ಜಿಬಿಎ ಸಿಬ್ಬಂದಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. “ನಾವು ಪಾಲಿಕೆಯಿಂದ ಅನುಮತಿ ತೆಗೆದುಕೊಂಡೇ ವ್ಯಾಪಾರ ಮಾಡುತ್ತಿದ್ದೇವೆ. ಹೀಗೆ ಏಕಾಏಕಿ ತೆರವು ಮಾಡಿದರೆ ನಾವು ಬೀದಿಗೆ ಬೀಳುತ್ತೇವೆ. ನಮಗೂ ಮಕ್ಕಳು ಇದ್ದಾರೆ. ದಯವಿಟ್ಟು ತೆರವು ಮಾಡಬೇಡಿ” ಎಂದು ವ್ಯಾಪಾರಿಗಳು ಕೈ ಮುಗಿದು ಬೇಡಿಕೊಂಡರೂ ಅಧಿಕಾರಿಗಳು ಸ್ಪಂದಿಸಲಿಲ್ಲ.

ವ್ಯಾಪಾರಿಗಳ ಮನವಿಗೂ ಕಿವಿಗೊಡದ ಸಿಬ್ಬಂದಿಗಳು ತೆರವು ಕಾರ್ಯ ಮುಂದುವರಿಸಿದರು. ಈ ವೇಳೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಅನಧಿಕೃತವಾಗಿ ಅಳವಡಿಸಲಾಗಿದ್ದ OFC ಕೇಬಲ್ಗಳನ್ನು ಸಹ ಸಿಬ್ಬಂದಿಗಳು ಕಟ್ ಮಾಡಿದರು.
OFC ಕೇಬಲ್ ಕಟ್ ಮಾಡಿದ ಪರಿಣಾಮ ಗಾಂಧಿ ಬಜಾರ್ನಲ್ಲಿರುವ ಕೆಲವು ವಾಣಿಜ್ಯ ಕಟ್ಟಡಗಳ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಕಟ್ಟಡ ಮಾಲೀಕರು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಗಾಬರಿಗೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಿಬಿಎ ಅಧಿಕಾರಿಗಳು ನಿಯಮಬಾಹಿರವಾಗಿ ಅಳವಡಿಸಲಾದ ಕೇಬಲ್ಗಳು ಮತ್ತು ರಸ್ತೆ ಒತ್ತುವರಿ ಮಾಡಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಠಾತ್ ತೆರವಿನಿಂದ ಜೀವನೋಪಾಯ ಕಳೆದುಕೊಂಡಿರುವುದಾಗಿ ವ್ಯಾಪಾರಿಗಳು ಆರೋಪಿಸಿದ್ದು, ಸೂಕ್ತ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತೆರವು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
