
ಹುಟ್ಟಿದ ಒಂದೇ ದಿನಕ್ಕೆ ಹಸುಗೂಸನ್ನು ಬಿಟ್ಟು ಪರಾರಿಯಾದ ತಾಯಿ..!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಕ್ಷತ್ರ ಆಸ್ಪತ್ರೆಯಲ್ಲಿ ಮಾನವೀಯತೆ ಪ್ರಶ್ನಿಸುವ ಘಟನೆ ಬೆಳಕಿಗೆ ಬಂದಿದೆ. ಹೆರಿಗೆಯಾದ ಕೇವಲ ಒಂದೇ ದಿನದೊಳಗೆ ತಾಯಿ ತನ್ನ ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕಳೆದ ಶುಕ್ರವಾರ ಹೆರಿಗೆಗಾಗಿ ದೇವನಹಳ್ಳಿ ಪಟ್ಟಣದ ನಕ್ಷತ್ರ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದು, ಅದೇ ದಿನ ಹೆರಿಗೆಯಾಗಿದೆ. ತಾಯಿ ಮತ್ತು ಮಗು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನವಜಾತ ಶಿಶುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ವೈದ್ಯರು ಮಗುವನ್ನು ರವಾನಿಸಿದ್ದಾರೆ.

ಮಗುವನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿದ ಬಳಿಕ, ತಾಯಿ ದೇವನಹಳ್ಳಿ ನಕ್ಷತ್ರ ಆಸ್ಪತ್ರೆಯಿಂದ ಯಾರಿಗೂ ಮಾಹಿತಿ ನೀಡದೇ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.
ನಂತರ ಪ್ರಕರಣದ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಮಗುವಿನ ಆರೋಗ್ಯ ಹಾಗೂ ಆರೈಕೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪ್ರಕರಣದ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತನಿಖೆ ಮುಂದುವರೆಸಿದ್ದು, ತಾಯಿ ಪರಾರಿಯಾಗಲು ಕಾರಣವೇನು, ಆಕೆಯ ಗುರುತು ಹಾಗೂ ಹಿನ್ನೆಲೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ನವಜಾತ ಶಿಶುವಿನ ಆರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
