BlogLatestರಾಜ್ಯ-Karnataka

ಅಕ್ಕಿಯೂ ಇಲ್ಲ, ಹಣವೂ ಇಲ್ಲ, ಗೃಹಲಕ್ಷ್ಮಿ ಬರಲೇ ಇಲ್ಲ : ಫಲಾನುಭವಿಗಳ ಆಕ್ರೋಶ

ಬೆಂಗಳೂರು : ಅಕ್ಕಿಯ ಕೊರತೆ ಕಾರಣ ನೀಡಿ ಬಿಪಿಎಲ್‌ ಕಾರ್ಡ್‌ದಾರ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರಕಾರ ಫಲಾನುಭವಿಗಳ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು. ಪ್ರತಿ ಕೆಜಿ ಅಕ್ಕಿಗೆ ತಲಾ 34ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ನೀಡಲಾಗುತ್ತಿತ್ತು. ಅದರಂತೆ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮಾವಣೆಯಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಹಣ ಪಾವತಿಯಾಗಿಲ್ಲ. ಹೀಗಾಗಿ ಫಲಾನುಭವಿಗಳು ಪ್ರತಿದಿನ ಬೆಂಗಳೂರು‌ ಒನ್ ಹಾಗೂ ಬ್ಯಾಂಕ್​ಗಳನ್ನ ಸುತ್ತುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿದ್ದ 2,000 ರೂ. ಎರಡು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ವರ್ಗವಾಗಿಲ್ಲ. ಇದೀಗ ಅನ್ನಭಾಗ್ಯದ ಹಣ ಕೂಡ 2 ತಿಂಗಳಿನಿಂದ ಬಂದಿಲ್ಲ ಅಂತ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೇನೂ ಸಿದ್ದರಾಮಾಯ್ಯನವರನ್ನ ದುಡ್ಡೇ ಕೊಡಿ, ಅಕ್ಕಿಕೊಡಿ, ಫ್ರಿ ಬಸ್ ಕೊಡಿ ಅಂತ ಹೇಳಿಲ್ಲ. ಆದರೆ ಅಧಿಕಾರಕ್ಕೆ ಬರುವ ಆಸೆಗಾಗಿ ಯೋಜನೆ ಜಾರಿ ಮಾಡಿ, ಸ್ವಲ್ಪ ದಿನ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ.‌ ಸರ್ಕಾರ ಕೊಡುವ ದುಡ್ಡನ್ನು ನಂಬಿ ನಾವು ಜೀವನ ಮಾಡುತ್ತಿಲ್ಲ. ಆದರೆ ಕೊಡುತ್ತೇವೆ ಎಂದು ಮೋಸ ಮಾಡಿದರು ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ತಿಂಗಳಿಗೆ 2,000 ರೂ. ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಎರಡು ತಿಂಗಳದ್ದು ಬಾಕಿ ಇದೆ. ಜೂನ್ ತಿಂಗಳ ಮೊತ್ತವನ್ನು ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿತ್ತು.

ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ತಡವಾಗುತ್ತಿದೆ. ಜುಲೈ, ಆಗಸ್ಟ್ ಗೃಹಲಕ್ಷ್ಮಿ ಹಣ ಶೀಘ್ರ ಫಲಾನುಭವಿಗಳ ಖಾತೆಗಳಿಗೆ ವರ್ಗವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿಎ ಲಕ್ಷ್ಮೀ ಹೆಬ್ಬಾಳ್ಕರ್ ಕೆಲವು ದಿನಗಳ ಹಿಂದೆ ತಿಳಿಸಿದ್ದರು.

Share with Friends
author avatar
News Desk