
ನೀಟ್ ಕಿಚ್ಚು..ಪೊಲೀಸರ ಲಾಠಿ ಚಾರ್ಚ್ ಗೆ ಸುಪ್ರೀಂ ಗರಂ
ನವದೆಹಲಿ,ಜು,27: ನೀಟ್ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಚ್ ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಲಾಠಿಚಾರ್ಜ್ ಮಾಡುವಂತಿಲ್ಲ. ಶಾಂತಿಯುತ ಪ್ರತಿಭಟನೆ ಪ್ರಜೆಗಳ ಸಂವಿಧಾನಾತ್ಮಕ ಹಕ್ಕು ಎಂದು ಸಿಜೆಐ ಸ್ಪಷ್ಟಪಡಿಸಿದರು.
ಮಿತಿಮೀರಿದ ಬಲಪ್ರಯೋಗದ ತನಿಖೆ ಹಾಗೂ ಏಕರೂಪದ ಪೊಲೀಸ್ ಶಿಷ್ಟಾಚಾರದ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿದ್ದು, ಪೊಲೀಸರ ರಕ್ಷಣೆಯ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ್ದ ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಪೆಲೆಟ್ ಗನ್ ಹಾಗೂ ಅಶ್ರವಾಯು ಸಿಡಿಸಿದ್ದರು. ಅಲ್ಲದೇ ದೇಶಾದ್ಯಂತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನದ ಅಡಿಯಲ್ಲಿ ಪ್ರಜೆಗಳಿಗೆ ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಶಾಂತಿಯುತ ಆಂದೋಲನ ನಡೆಯುತ್ತಿರುವಾಗ ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಸ್ಪಷ್ಟಪಡಿಸಿದರು.
ಪೊಲೀಸರ ಕಡೆಯಿಂದ ಮಿತಿಮೀರಿದ ಬಲಪ್ರಯೋಗ ನಡೆದಿದ್ದರೆ ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಪ್ರತಿಭಟನೆಗಳನ್ನು ನಿರ್ವಹಿಸುವಾಗ ಶಿಸ್ತು ಕಾಯ್ದುಕೊಳ್ಳಲು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಪೊಲೀಸ್ ಶಿಷ್ಟಾಚಾರ ಜಾರಿಗೆ ತರುವ ಅಗತ್ಯವಿದೆ.
ಇನ್ನು ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳನ್ನು ಪ್ರತಿನಿಧಿಸುವ ವಕೀಲರಿಗೂ ವಿಚಾರಣೆಯಲ್ಲಿ ಭಾಗವಹಿಸಲು ಪೀಠ ಅವಕಾಶ ನೀಡಿತು.ವಿದ್ಯಾರ್ಥಿಗಳಾಗಲಿ ಅಥವಾ ಪೊಲೀಸರಾಗಲಿ, ಯಾರಿಗೇ ಗಾಯಗಳಾದರೂ ಅದು ಸಮಾನ ಕಾಳಜಿಯ ವಿಷಯವಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ರಕ್ಷಣೆಗೆ ಸಾಕಷ್ಟು ಹೆಲ್ಮೆಟ್ ಹಾಗೂ ಉಪಕರಣಗಳನ್ನು ಏಕೆ ಒದಗಿಸಿಲ್ಲ ಎಂದು ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಲಾಗುವುದು ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ತಿಳಿಸಿದರು.
